ಅಣ್ಣಾಮಲೈ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ; ಯಾವ ಪಕ್ಷ ಸೇರುತ್ತಿದ್ದಾರೆ ಗೊತ್ತೇ?
ನ್ಯೂಸ್ ಕನ್ನಡ ವರದಿ: ಹೌದು ಇಂತಹ ಒಂದು ಶಾಕಿಂಗ್ ನ್ಯೂಸ್ ಕೇಳಿ ಬಂದಿದ್ದು, ಕರ್ನಾಟಕದ ‘ಸಿಂಗಂ’ ಎಂದೇ ಖ್ಯಾತಿ ಪಡೆದಿರುವ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಮಾಧ್ಯಮಕ್ಕೆ ಸಿಕ್ಕಿದೆ.
ಇದೀಗ ಬೆಂಗಳೂರು ದಕ್ಷಿಣ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣಾಮಲೈ ಅವರು ರಾಜೀನಾಮೆ ನೀಡುವುದು ಖಚಿತ ಎನ್ನಲಾಗಿದ್ದು, ಜೂನ್ 4 ರಂದು ರಾಜೀನಾಮೆ ಸಲ್ಲಿಸಲಿದ್ದಾರೆ. ಈ ಸಂಬಂಧ ಮೇ 28ರ ಮಂಗಳವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದಾರೆ ಎಂದೂ ಹೇಳಲಾಗಿದ್ದು, ಈ ಸುದ್ದಿ ರಾಜ್ಯದ ಜನತೆಯ ಮಟ್ಟಿಗೆ ತುಂಬಾ ಬೇಜಾರಿನ ಸಂಗತಿಯೇ ಸರಿ.
ನಿಷ್ಕಲಂಕ, ನೇರನುಡಿಯ ಅಧಿಕಾರಿಯಾಗಿ, ತಮ್ಮ ಕೆಲಸದ ಶೈಲಿಯಿಂದ ಹಾಗೂ ಸರಳ ವ್ಯಕ್ತಿತ್ವದಿಂದ ಎಲ್ಲರಿಗೂ ಪ್ರೇರಣೆ ಆಗಿರುವ ಅಣ್ಣಾಮಲೈ ನಿರ್ಧಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿದ್ದು, ಪೊಲೀಸ್ ಅಧಿಕಾರಿ ಆಗಿರುವುದಕ್ಕಿಂತ ರಾಜಕೀಯ ಪ್ರವೇಶ ಮಾಡಿ ನೇರ ಜನರ ಸೇವೆ ಮಾಡುವ ಉದ್ದೇಶ ಹೊಂದಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಜನ ಸೇವೆ ಮಾಡುವುದು ಕಷ್ಟಸಾಧ್ಯವಾಗಿದ್ದು ಹಾಗಾಗಿ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ರಾಜಕೀಯ ಸೇರುತ್ತಾರೆ ಅನ್ನುವ ಸುದ್ದಿಯೇನೋ ಸರಿ, ಆದರೆ ಯಾವ ಪಕ್ಷ ಸೇರುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಮನೆಮಾಡಿತ್ತು. ಸದ್ಯ ಲಭ್ಯವಾಗಿರುವ ಮಾಹಿತಿ ಅನ್ವಯ ಅಣ್ಣಾಮಲೈ ಅವರು ಕರ್ನಾಟಕದಿಂದ ತಮ್ಮ ರಾಜಕೀಯ ಪ್ರಯಾಣ ಆರಂಭಿಸುತ್ತಿಲ್ಲ, ಅವರು ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸಾಕಷ್ಟು ತಿಂಗಳಿನಿಂದ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಇದೀಗ ಬಂದಿರುವ ಮಾಹಿತಿ ಪ್ರಕಾರ, ಕಾಂಗ್ರೆಸ್ ಪಕ್ಷದ ಯುಪಿಎ ಮೈತ್ರಿಯ ಅಂಗಪಕ್ಷವಾಗಿರುವ ತಮಿಳುನಾಡಿನ ಡಿಎಂಕೆ ಪಕ್ಷಕ್ಕೆ ಅಣ್ಣಾಮಲೈ ಸೇರ್ಪಡೆ ಆಗಲಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಡಿಎಂಕೆ ಅಧಿನಾಯಕ ಸ್ಟಾಲಿನ್, ಅಣ್ಣಾಮಲೈ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 2021ಕ್ಕೆ ತಮಿಳುನಾಡು ವಿಧಾನಸಭೆಯಲ್ಲಿ ಅಣ್ಣಾಮಲೈ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದು, ಕೊಯಮತ್ತೂರು ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಒಟ್ಟಿನಲ್ಲಿ ತಮ್ಮ ಖಡಕ್ ನಿರ್ಧಾರಗಳಿಂದ ಭೃಷ್ಟರಿಗೆ, ಅನ್ಯಾಯ ಮಾಡುವವರಿಗೆ ಸಿಂಹಸಪ್ನವಾಗಿದ್ದ ಅಣ್ಣಾಮಲೈ ಇದೀಗ ಹೊಸ ಪಯಣ ಆರಂಭಿಸಲು ಸಿದ್ಧತೆ ನಡೆಸಿದ್ದು, ಅಲ್ಲೂ ಅದೇ ರೀತಿಯ ಛಾಪು ಮೂಡಿಸಲಿ ಎಂದು ಕರ್ನಾಟಕದ ಜನತೆ ಹಾರೈಸಬೇಕಾಗಿದೆ.