ವಿಶ್ವಕಪ್ ಕ್ರಿಕೆಟ್: ದಕ್ಷಿಣ ಆಫ್ರಿಕಾ ವಿರುಧ್ಧ ಗೆಲುವಿನೊಂದಿಗೆ ಭಾರತ ಶುಭಾರಂಭ!

ನ್ಯೂಸ್ ಕನ್ನಡ ವರದಿ: 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಸೌತ್ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ಟೀಂ ಇಂಡಿಯಾ ಇನ್ನೂ15 ಎಸೆತ ಬಾಕಿ ಇರುವಂತೆ 6 ವಿಕೆಟ್ ಗೆಲುವು ಸಾಧಿಸಿದೆ. ಇದರೊಂದಿಗೆ ಸೌತ್ಆಫ್ರಿಕಾ ಹ್ಯಾಟ್ರಿಕ್ ಸೋಲು ಕಂಡಿದೆ.

ಗೆಲುವಿಗೆ 228 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭ ಉತ್ತಮವಾಗಿರಲಿಲ್ಲ. ಶಿಖರ್ ಧವನ್ 8 ರನ್ ಸಿಡಿಸಿ ಔಟಾದರು. ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು. ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರೆ, ರೋಹಿತ್ ಶರ್ಮಾ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು.

ಕೊಹ್ಲಿ 18 ರನ್ ಸಿಡಿಸಿ ಔಟಾದರು. ಆದರೆ ರೋಹಿತ್ ಹೋರಾಟ ಮುಂದುವರಿಸಿದರು. ಹಾಫ್ ಸೆಂಚುರಿ ಸಿಡಿಸಿದ ರೋಹಿತ್, ಸೌತ್ಆಫ್ರಿಕಾ ತಂಡದ ತಲೆನೋವು ಹೆಚ್ಚಿಸಿದರು. ರೋಹಿತ್ ಹಾಗೂ ಕೆಎಲ್ ರಾಹುಲ್ 85 ರನ್ ಜೊತೆಯಾಟ ನೀಡಿದರು. ರಾಹುಲ್ 26 ರನ್ ಸಿಡಿಸಿ ಔಟಾದರು. ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದ ಎಂ.ಎಸ್.ಧೋನಿ, ರೋಹಿತ್‌ಗೆ ಉತ್ತಮ ಸಾಥ್ ನೀಡಿದರು. ಇತ್ತ ರೋಹಿತ್ 23ನೇ ಏಕದಿನ ಶತಕ ಸಿಡಿಸಿ ಮಿಂಚಿದರು.

ಧೋನಿಗೆ 34 ರನ್ ಸಿಡಿಸಿ ಔಟಾದರು. ಟೀಂ ಇಂಡಿಯಾ ಗೆಲುವಿಗೆ 18 ಎಸೆತದಲ್ಲಿ 5 ರನ್ ಅವಶ್ಯಕತೆ ಇತ್ತು. ಹಾರ್ದಿಕ್ ಪಾಂಡ್ಯ ಬೌಂಡರಿ ಸಿಡಿಸೋ ಮೂಲಕ ಟೀಂ ಇಂಡಿಯಾ 47.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ರೋಹಿತ್ ಶರ್ಮಾ ಅಜೇಯ 122 ರನ್ ಸಿಡಿಸಿದರೆ, ಹಾರ್ಧಿಕ್ ಅಜೇಯ 15 ರನ್ ಬಾರಿಸಿದರು. ಈ ಮೂಲಕ ಭಾರತ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

Leave a Reply

Your email address will not be published. Required fields are marked *