ಚೂರಿ ಇರಿತ ಪ್ರಕರಣ; ಭಗ್ನ ಪ್ರೇಮಿಯ ಬಗ್ಗೆ ಗೊತ್ತಾಯ್ತು ಮತ್ತಷ್ಟು ಸ್ಫೋಟಕ ಮಾಹಿತಿ!
ನ್ಯೂಸ್ ಕನ್ನಡ ವರದಿ (29-6-2019) ಮಂಗಳೂರು: ಭಗ್ನ ಪ್ರೇಮಿಯಿಂದ ಯುವತಿಯ ಮೇಲೆ ಚೂರಿ ಇರಿತ ಪ್ರಕರಣದ ಬಗ್ಗೆ ಆಘಾತಕಾರಿ ಮಾಹಿತಿಯೊಂದು ಲಭಿಸಿದೆ ಎರಡು ದಿನಗಳಿಂದ ಯುವತಿಗೆ ಕೊಲೆಗೆ ಸಂಚು ರೂಪಿಸಿ, ಗಾಂಜಾ ಸೇವಿಸಿ, ಮತ್ತಿನಲ್ಲಿ ಈ ಘೋರ ಕೃತ್ಯವನ್ನು ಎಸಗಿದ್ದಾನೆ ಎಂದು ಹೇಳಲಾಗಿದೆ. ಡ್ಯಾನ್ಸ್ ಕ್ಲಾಸ್ ನಲ್ಲಿ ಇಬ್ಬರ ಪ್ರೇಮಾಂಕುರವಾಗಿ ಕೊನೆಗೆ ಆಕೆ ಕೈಕೊಟ್ಟಳು ಎಂದು ಕೆಲವು ಮೂಲಗಳಿಂದ ತಿಳಿದುಬಂದರೆ ಆತನೇ ಏಕಮುಖವಾಗಿ ಪ್ರೇಮಿಸಿ ಯುವತಿಯನ್ನು ಯಮಪಾಶಕ್ಕೆ ಸಿಲುಕಿಸಿದ್ದಾನೆ ಎಂದೂ ಹೇಳಲಾಗಿದೆ.
ಖಾಸಗಿ ಕಾಲೇಜಿನಲ್ಲಿ ಎಂಬಿಎ ವಿದ್ಯಾರ್ಥಿನಿಯಾಗಿದ್ದ ದೀಕ್ಷಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಆರೋಪಿ ಸುಶಾಂತ್, 50 ಸಾವಿರ ರೂ. ಖರ್ಚು ಮಾಡಿ ಯುವತಿಯ ಹುಟ್ಟುಹಬ್ಬವನ್ನು ಆಚರಿಸಿದ್ದ. ಅದಾದ ಮರುದಿನವೇ ಸುಶಾಂತ್ ವಿರುದ್ಧ ಯುವತಿ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಳು ಎನ್ನಲಾಗಿದೆ. ನಿನ್ನೆ ಮಧ್ಯಾಹ್ನದವರೆಗೂ ಕೆಲಸ ಮಾಡಿಕೊಂಡಿದ್ದ ಸುಶಾಂತ್, ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡು ಗಾಂಜಾ ಸೇವಿಸಿ ಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಸುಮಾರು 12 ಬಾರಿ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ಯುವತಿಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಯುವಕ ಸುಶಾಂತ್ ಮಾತ್ರ ಅಪಾಯದಿಂದ ಪಾರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.