ಕಾಂಗ್ರೆಸ್ ನಲ್ಲಿ ಮುಸ್ಲಿಮರನ್ನು ಕೇಳುವವರಿಲ್ಲ: ಸ್ವಪಕ್ಷದ ವಿರುಧ್ಧ ತನ್ವೀರ್ ಸೇಠ್ ಗರಂ
ನ್ಯೂಸ್ ಕನ್ನಡ ವರದಿ: ಮುಸ್ಲಿಮ್ ಸಮುದಾಯದ ಶಾಸಕರಿಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಲೆಯೇ ಇಲ್ಲದಂತಾಗಿದೆ ಎಂದು ಶಾಸಕ ತನ್ವೀರ್ಸೇಠ್ ಅಸಮಾಧಾನ ಹೊರಹಾಕಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಾಡು ಕೇಳುವವರು, ಹೇಳುವವರು ಇಲ್ಲದಂತಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಪಾಡು ಹೇಗಿದೆ ಎಂದರೆ ನಮಗೆ ಇಲ್ಲಿ ಬೆಲೆ ಇಲ್ಲ. ಸ್ಥಾನಮಾನ ಇಲ್ಲ. ಇನ್ನು ಬಿಜೆಪಿಯವರು ನಮಗೆ ಬೆಲೆ ಕಟ್ಟಲ್ಲ. ಒಟ್ಟಿನಲ್ಲಿ ನಾವು ಸಂದಿಗ್ಧ ಪರಿಸ್ಥಿತಿಯಲ್ಲಿ ದಿನ ದೂಡುವಂತಾಗಿದೆ ಎಂದು ತಿಳಿಸಿದರು.
ಇಬ್ಬರು ಶಾಸಕರು ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿ ಸಿದ ಅವರು, ಇದು ರಾಜ್ಯ ರಾಜಕೀಯದಲ್ಲಿ ಅಲ್ಲೋಲ- ಕಲ್ಲೋಲ ಸ್ಥಿತಿ ನಿರ್ಮಿಸಿದಂತಾಗಿದೆ. ಜನ ಪ್ರತಿನಿಧಿಗಳನ್ನು ಮಾರಾಟದ ವಸ್ತುವಾಗಿ ನೋಡುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಹಾಗೆಂದು ಸರ್ಕಾರ ಉರುಳುತ್ತದೆ ಎಂದು ಹೇಳುವುದು ತಪ್ಪು ಎಂದರು. ಇಬ್ಬರು ಶಾಸಕರು ವೈಯಕ್ತಿಕ ಕಾರಣಗಳಿಗೆ ರಾಜೀನಾಮೆ ನೀಡಿದ್ದಾರೆ. ಕೇವಲ ಇಬ್ಬರು ಶಾಸಕರ ರಾಜೀನಾಮೆಯಿಂದ ಸರ್ಕಾರವನ್ನು ಉರುಳಿಸುವುದು ಸಾಧ್ಯವಿಲ್ಲ ಎಂದು ತನ್ವೀರ್ಸೇಠ್ ಹೇಳಿದರು.
ಶಾಸಕರು ಪಕ್ಷಾಂತರ ಮಾಡುವುದರಿಂದ ಜನರಲ್ಲಿ ಬೇರೆ ರೀತಿಯ ಭಾವನೆ ಉಂಟು ಮಾಡುತ್ತದೆ. ಹಾಗಾಗಿ ಜನರ ಮತಕ್ಕೆ ಬೆಲೆ ಕೊಡೋಣ ಎಂದು ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ರಿವರ್ಸ್ ಆಪರೇಷನ್ ಮಾಡ್ತೀನಿ ಅಂದಿದ್ದಾರಲ್ಲ ಎಂಬ ಪ್ರಶ್ನೆಗೆ, ತನ್ವೀರ್ಸೇಠ್ ಆಪರೇಷನ್, ರಿವರ್ಸ್ ಅಪರೇಷನ್ ಎರಡೂ ತಪ್ಪು ಎಂದು ಗರಂ ಆಗಿ ಹೇಳಿದರು.