ಬಿಜೆಪಿಯ ಯಾವುದೇ ಶಾಸಕನೂ ಕಾಂಗ್ರೆಸ್ ಗೆ ಹೋಗಲ್ಲ, ರಿವರ್ಸ್ ಆಪರೇಷನ್ ಮಾಡಿ ನೋಡಲಿ: ಬಿಎಸ್ ವೈ
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ನಡೆಯುತ್ತಿರುವ ತೀವ್ರ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ಕಾಂಗ್ರೆಸ್ ಬಿಜೆಪಿ ನಾಯಕರ ವಾಗ್ದಾಳಿ ಸಮರ ನಿರಂತರವಾಗಿ ನಡೆಯುತ್ತಿದ್ದು, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯುರಪ್ಪನವರು ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. “ನಮ್ಮ ಶಾಸಕರನ್ನು ಕಾಂಗ್ರೆಸ್ ನಾಯಕರು ಸೆಳೆಯುವುದಾದರೆ ಸೆಳೆದುಕೊಳ್ಳಲಿ. ನಾವಂತೂ ಬೇರೆ ಪಕ್ಷದ ಯಾರೊಬ್ಬರನ್ನೂ ಸಂಪರ್ಕ ಮಾಡಿಲ್ಲ. ರಿವರ್ಸ್ ಆಪರೇಷನ್ ಮಾಡುತ್ತೇವೆ ಎಂದರೆ ಮಾಡಿಕೊಳ್ಳಲಿ” ಎಂದು ಚಾಟಿ ಬೀಸಿದ್ದಾರೆ.
ಬಿಜೆಪಿಯವರು ನಮ್ಮ ಶಾಸಕರಿಗೆ ಆಪರೇಷನ್ ಕಮಲ ಮಾಡಿದರೆ, ನಮಗೂ ಕೂಡ ರಿವರ್ಸ್ ಆಪರೇಷನ್ ಮಾಡಲು ಬರುತ್ತದೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದ ಯಡಿಯೂರಪ್ಪ, ರಿವರ್ಸ್ ಆಪರೇಷನ್ ಮಾಡುವುದಾದರೆ ಮಾಡಲಿ. ನಾವೇನು ಅವರನ್ನು ತಡೆದಿದ್ದೇವೆಯೇ ಎಂದು ಪ್ರಶ್ನಿಸಿದರು. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ತಿಂಗಳಿನಿಂದ ಬಿಜೆಪಿ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದುವರೆಗೂ ಎಷ್ಟು ಮಂದಿ ಬಿಜೆಪಿ ಶಾಸಕರು ಹೊರ ಹೋಗಿದ್ದಾರೆ ಎಂದು ಕಿಡಿಕಾರಿದರು.