ನಿರ್ಮಲಾ ಸೀತಾರಾಮನ್ ಮಂಡಿಸಿದ ಚೊಚ್ಚಲ ಬಜೆಟ್ ಬಗ್ಗೆ ಸಿಎಂ ಎಚ್ಡಿಕೆ ಹೇಳಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಶುಕ್ರವಾರ 2019-20 ರ ಸಾಲಿನ ತಮ್ಮ ಚೊಚ್ಚಲ ಕೇಂದ್ರ ಬಜೆಟ್ ಮಂಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಚೊಚ್ಚಲ ಬಜೆಟ್, ನಮ್ಮ ನಿರೀಕ್ಷೆಗಳನ್ನು ಹಸಿಯಾಗಿಸಿದೆ’ ಎಂದು ಹೇಳಿದರು. ನಮ್ಮ ರಾಜ್ಯವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ರೈಲ್ವೆ ಯೋಜನೆಗಳಿಗೆ ಅದರಲ್ಲೂ ಉಪನಗರ ರೈಲು ಯೋಜನೆಗಳಿಗೆ ಹೆಚ್ಚಿನ ಕೊಡುಗೆ ನೀಡುವರೆಂದು ನಿರೀಕ್ಷಿಸಿದ್ದೆ. ಈ ನಿಟ್ಟಿನಲ್ಲಿ ಯಾವುದೇ ಘೋಷಣೆ ಮಾಡದಿರುವುದು ನಿರಾಶೆ ತಂದಿದೆ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರೈತ ಉತ್ಪಾದಕ ಸಂಘಗಳ ಸ್ಥಾಪನೆಗೆ ಒತ್ತು, ಎಪಿಎಂಸಿಗಳಲ್ಲಿ ಆನ್‌ಲೈನ್ ಮಾರುಕಟ್ಟೆ ಬಲಪಡಿಸುವ ಕಾರ್ಯಕ್ರಮ ಹಾಗೂ ಗ್ರಾಮೀಣ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಯೋಜನೆಗಳು ಸ್ವಾಗತಾರ್ಹ. ಆದರೆ ರೈತರ ಆತ್ಮಸ್ಥೈರ್ಯ ಹೆಚ್ಚಿಸಲು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಿಎಸ್‌ಟಿ ತೆರಿಗೆಯಲ್ಲಿ ರಾಜ್ಯದ ಪಾಲಿನ ಮೊತ್ತ ಕಡಿಮೆಯಾಗುವ ಸಾಧ್ಯತೆ ಇದೆ. ರಾಜ್ಯದ ಪಾಲಿಗೆ ಸುಮಾರು ರೂ. 1600 ಕೋಟಿಗಳಷ್ಟು ಕೊರತೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ರಾಜ್ಯಗಳ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್, ಡೀಸೆಲ್‌ ಮೇಲೆ ಸೆಸ್ ಏರಿಕೆ ಮಾಡಿರುವುದರಿಂದ ರಾಜ್ಯವು ಇಂಧನ ಮೇಲೆ ಸೆಸ್ ವಿಧಿಸಲು ಅವಕಾಶ ಕಡಿಮೆ ಮಾಡಿದಂತಾಗಿದೆ. ಅಲ್ಲದೆ, ಇಂಧನ ಬೆಲೆ ಏರಿಕೆಯಿಂದ ಪ್ರತಿಯೊಬ್ಬರಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೊರೆಯಾಗಲಿದೆ’ ಎಂದಿದ್ದಾರೆ.

Leave a Reply

Your email address will not be published. Required fields are marked *