ದಕ್ಷಿಣ ಕ್ಯಾಲಿಫೋರ್ನಿಯಾ: ಮರುಕಳಿಸಿದ ಭೂಕಂಪ, 7.1 ತೀವ್ರತೆಯೊಂದಿಗೆ ಭೂಮಿ ತಲ್ಲಣ
ನ್ಯೂಸ್ ಕನ್ನಡ ವರದಿ : ಲಾಸ್ ಏಂಜಲೀಸ್ನ ಈಶಾನ್ಯಕ್ಕೆ 200 ಮೈಲಿ ದೂರದಲ್ಲಿರುವ ರಿಡ್ಜೆಕ್ರೆಸ್ಟ್ ನಗರದ ಸಮೀಪ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿತ್ತು, ಈ ಪ್ರದೇಶದಲ್ಲಿ ದಶಕಗಳಲ್ಲಿ ಉಂಟಾದ ಅತಿದೊಡ್ಡ ಭೂಕಂಪ ಇದಾಗಿತ್ತು, ಆದರೆ ಇದರ ಬೆನ್ನಲ್ಲೇ ಈಗ 7.1 ತೀವ್ರತೆಯೊಂದಿಗೆ ಭೂಕಂಪನ ದಾಖಲಾಗಿದೆ ಎಂದು ಯು.ಎಸ್. ಭೂವೈಜ್ಞಾನಿಕ ಸಮೀಕ್ಷೆ ಮತ್ತು ಯುರೋಪಿಯನ್ ಭೂಕಂಪ ಮಾನಿಟರ್ ಹೇಳಿದೆ. 25 ವರ್ಷಗಳ ಬಳಿಕ ಶುಕ್ರವಾರ ಈ ಪ್ರದೇಶದಲ್ಲಿ ನಡೆದ 6.4 ತೀವ್ರತೆಯ ಭೂಕಂಪದ ಬೆನ್ನಲ್ಲೇ ಇಂದೂ ಸಹ ಮರುಕಳಿಸಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಗುರುವಾರ ಸಂಭವಿಸಿದ ಭೂಕಂಪದಲ್ಲಿ ಕೆಲವರಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿದ್ದು, ಮನೆಗಳಲ್ಲಿ ಅನಿಲ ಕೊಳವೆಗಳು ಮುರಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಆರಂಭದಲ್ಲಿ ಭೂಕಂಪವು 6.6 ತೀವ್ರತೆ ಇತ್ತು ಎಂದು ವರದಿಯಾಗಿದೆ. ಕೇವಲ 5.4 ಮೈಲಿಗಳ ಆಳದಲ್ಲಿ ಭೂಕಂಪದ ಕೇಂದ್ರವಿದೆ ಎನ್ನಲಾಗಿದೆ. ಲಾಸ್ ಏಂಜಲೀಸ್ನಲ್ಲಿ ಉಂಟಾದ ಭೂಕಂಪದ ನಡುಕವು ಹಲವಾರು ಸಣ್ಣ ಪಟ್ಟಣಗಳಲ್ಲೂ ತನ್ನ ಪ್ರಭಾವ ಬೀರಿದೆ. ಘಟನೆ ವರದಿಯಾದ ಕೂಡಲೇ, ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ ಟ್ವೀಟ್ನಲ್ಲಿ ಇದು “ಅತಿದೊಡ್ಡ ಭೂಕಂಪ” ಎಂದು ಹೇಳಿದೆ.