ರಾಜೀವ್ ಗಾಂಧಿ ಹತ್ಯೆ ಪ್ರಕರಣ ಆರೋಪಿ ನಳಿನಿಗೆ ಮದ್ರಾಸ್ ಹೈಕೋರ್ಟ್ ನಿಂದ 1 ತಿಂಗಳ ಪೆರೋಲ್ !

ನ್ಯೂಸ್ ಕನ್ನಡ ವರದಿ : 1991 ಮೇ ತಿಂಗಳಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ನಡೆದಿತ್ತು. ತಮಿಳುನಾಡಿನ ಶ್ರೀಪೆರಂಬೂರ್​​ನಲ್ಲಿ ಚುನಾವಣೆ ರ್ಯಾಲಿಯ ಸಮಯದಲ್ಲಿ ಎಲ್​ಟಿಟಿಇ ಸಂಘಟನೆಯ ಆತ್ಮಾಹುತಿ ಬಾಂಬ್​ ದಾಳಿಗೆ ರಾಜೀವ್​ ಗಾಂಧಿ ಬಲಿಯಾಗಿದ್ದರು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಎಸ್​. ನಳಿನಿ​​ಯನ್ನು ಪೆರೋಲ್​ ಮೇಲೆ ಒಂದು ತಿಂಗಳು ಬಿಡುಗಡೆಗೆ ಅವಕಾಶ ನೀಡಿ ಮದ್ರಾಸ್​ ಹೈಕೋರ್ಟ್​​ ಆದೇಶ ಹೊರಡಿಸಿದೆ.

ನಳಿನಿ ತನ್ನ ಮಗಳ ಮದುವೆ ಸಿದ್ಧತೆಗಾಗಿ ಆರು ತಿಂಗಳು ಪೆರೋಲ್​ ನೀಡಬೇಕೆಂದು ಏಪ್ರಿಲ್ ತಿಂಗಳಲ್ಲಿ ಮದ್ರಾಸ್​ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ತಾವೇ ಖುದ್ದು ಕೋರ್ಟ್​ನಲ್ಲಿ ವಾದ ಮಂಡಿಸುವುದಾಗಿ ಹೇಳಿದ್ದರು. ಹೀಗಾಗಿ ಇಂದು ನಳಿನಿಯನ್ನು ಕೋರ್ಟ್​​ ಮುಂದೆ ಹಾಜರುಪಡಿಸಲಾಗಿತ್ತು. 6 ತಿಂಗಳು ಪೆರೋಲ್​ ನೀಡಬೇಕೆಂದು ಮನವಿ ಮಾಡಿದರು. ಆದರೆ ಸರ್ಕಾರಿ ಪರ ವಕೀಲರು ಒಂದು ತಿಂಗಳ ಪೆರೋಲ್​ ಸಾಕೆಂದು ವಾದ ಮಂಡಿಸಿದ್ದರು. ನನ್ನ ಮಗಳು ಈಗ ಲಂಡನ್​ನಲ್ಲಿ ಇದ್ದಾಳೆ. ನಾನು ನನ್ನ ಗಂಡ ಕಳೆದ 27 ವರ್ಷಗಳಿಂದ ಜೈಲಿನಲ್ಲಿದ್ದೇವೆ. ನಮ್ಮ ಮಗಳು ಜೈಲಿನಲ್ಲಿಯೇ ಹುಟ್ಟಿದ್ದು, ಸಂಬಂಧಿಕರು ಬೆಳೆಸಿದ್ದಾರೆ. ಈಗ ಮದುವೆ ಮಾಡಲು ಸಿದ್ಧತೆ ನಡೆಸಿದ್ದು, ಒಂದು ತಿಂಗಳು ಕಾಲಾವಕಾಶ ಸಾಕಾಗುವುದಿಲ್ಲ ಎಂದು ನಳಿನಿ ಪ್ರತಿವಾದ ಮಾಡಿದ್ದರು. ವಾದ-ಪ್ರತಿವಾದಗಳ ಬಳಿಕ ಮದ್ರಾಸ್​ ಹೈಕೋರ್ಟ್​ ನಳಿನಿಗೆ ಒಂದು ತಿಂಗಳು ಪೆರೋಲ್​ ನೀಡಿ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *