ಹೆಂಡತಿ ಒಂದು ವಸ್ತು ಅಲ್ಲ, ಆಕೆ ತನ್ನೊಂದಿಗೆ ಇರಲೇಬೇಕೆಂದು ಗಂಡ ಒತ್ತಾಯಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್!
ನ್ಯೂಸ್ ಕನ್ನಡ ವರದಿ(08-04-2018): ಹೆಂಡತಿ ಒಂದು ವಸ್ತು ಅಲ್ಲ. ಆಕೆ ತನ್ನೊಂದಿಗೆ ಇರಲೇಬೇಕೆಂದು ಗಂಡ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಮ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕ್ರೂರತನದಿಂದ ಮಾನಸಿಕ ಕಿರುಕುಳ ನೀಡುತ್ತಾ ಆಕೆ ತನ್ನೊಂದಿಗೆ ಇರುವಂತೆ ಬಲವಂತ ಪಡಿಸಲು ಗಂಡನಿಗೆ ಹಕ್ಕಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ಮತ್ತು ದೀಪಕ್ ಮಿಶ್ರ ಅವರನ್ನು ಒಳಗೊಂಡ ಪೀಠವು ಈ ವಿಷಯವನ್ನು ಸ್ಪಷ್ಟಪಡಿಸಿತು. ಇಂತಹ ಅನೇಕ ಬಲವಂತದ ಪ್ರಕರಣಗಳು ದಾಖಲಾಗುತ್ತಿದ್ದು, ಪತ್ನಿಗೆ ಇಚ್ಚೆ ಇಲ್ಲದಿದ್ದಲ್ಲಿ ಪತಿಯು ಆಕೆಯನ್ನು ಬಲವಂತ ಪಡಿಸುವಂತಿಲ್ಲ ಎಂದು ಸುಪ್ರಿಮ್ ಕೋರ್ಟ್ ತಾಕೀತು ಮಾಡಿದೆ.
ಆಕೆ ಜಡವಸ್ತುವಲ್ಲ, ನೀನು ಆಕೆಗೆ ಬಲವಂತ ಮಾಡಲಾಗದು. ನಿನ್ನ ಜೊತೆ ವಾಸಿಸಲು ಆಕೆಗೆ ಇಷ್ಟವಿಲ್ಲ. ಇಷ್ಟಾದರು ನೀನು ಆಕೆ ನನ್ನೊಂದಿಗೆ ವಾಸಿಸಲು ಬಲವಂತ ಮಾಡುತ್ತಿರುವೆ, ಇದು ಹೇಗೆ ಸಾಧ್ಯ ಎಂದು ಪೀಠವು ಪ್ರಶ್ನಿಸಿ ನಿನ್ನ ಆಗ್ರಹವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.