ಸಿದ್ದರಾಮಯ್ಯನವರೇ, ನಿಮ್ಮ ಮಂತ್ರಿ ಸ್ಥಾನದ ಆಮಿಷಕ್ಕೆ ನಾವು ಒಳಗಾಗಲ್ಲ!: ಎಚ್ ವಿಶ್ವನಾಥ್

ನ್ಯೂಸ್ ಕನ್ನಡ ವರದಿ : ಸರಕಾರ ಉಳಿಸುವ ನಿಟ್ಟಿನಲ್ಲಿ ಶಾಸಕರೆಲ್ಲರೂ ಸಾಮೂಹಿಕ ರಾಜೀನಾಮೆ ನೀಡಿದ್ದು, ಅತೃಪ್ತ ಶಾಸಕರ ಭಿನ್ನಮತ ಶಮನಕ್ಕಾಗಿ ಸಚಿವ ಸ್ಥಾನ ಕೊಡಲು ಮುಂದಾಗಿದ್ದಾರೆ. ಈ ಕುರಿತು ಮುಂಬೈನಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಅತೃಪ್ತ ಶಾಸಕ ಎಚ್‌.ವಿಶ್ವನಾಥ್‌ ಸಚಿವರಾಗಲು ಅಥವಾ ಅಧಿಕಾರಕ್ಕಾಗಿ ಮೈತ್ರಿ ಸರ್ಕಾರದಿಂದ ಹೊರಗೆ ಬಂದಿಲ್ಲ. ಸರ್ಕಾರ ನಡೆಸಿಕೊಂಡ ರೀತಿಯಿಂದಾಗಿ ಬೇಸತ್ತು ಎಲ್ಲಾ ಅತೃಪ್ತರು ಹೊರಗೆ ಬಂದಿದ್ದೇವೆ. ರಾಜ್ಯದ ಅಭಿವೃದ್ಧಿಗಾಗಿ ನಾವೆಲ್ಲಾ ಈ ನಿಲುವನ್ನು ಕೈಗೊಂಡಿದ್ದೇವೆ. ಸಿದ್ದರಾಮಯ್ಯ ಅವರು ಸಚಿವ ಸ್ಥಾನದ ಆಫರ್‌ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು. ಆದರೆ, ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದರು.

ಅತೃಪ್ತರನ್ನು ಭೇಟಿಯಾಗಲು ಯಾರೇ ಬಂದರೂ ಅಥವಾ ಯಾರೇ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನ ಇಲ್ಲ. ಈಗಾಗಲೇ ನಾವೆಲ್ಲಾ ಒಗ್ಗಟ್ಟಾಗಿ ನಿರ್ಧಾರ ಕೈಗೊಂಡಿದ್ದೇವೆ. ಸಚಿವ ಡಿ.ಕೆ.ಶಿವಕುಮಾರ್‌ ಅವರು ಸರ್ಕಾರವನ್ನು ಉಳಿಸಲು ಏನು ಮಾಡಬೇಕೋ ಅದನ್ನು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಫಲವಾಗುವುದಿಲ್ಲ. ಅತೃಪ್ತರು ಒಗ್ಗಟ್ಟಾಗಿದ್ದೇವೆ. ಅತೃಪ್ತರೆಲ್ಲರದ್ದೂ ಒಂದೇ ನಿರ್ಧಾರ. ರಾಜೀನಾಮೆ ನೀಡಿರುವುದು ಸಚಿವ ಸ್ಥಾನ ಸಿಗುತ್ತದೆ ಎಂಬುದಾಗಲಿ ಅಥವಾ ಅಧಿಕಾರ ಸಿಗಲಿದೆ ಎಂಬ ಕಾರಣಕ್ಕಾಗಿ ಅಲ್ಲ. ಸರ್ಕಾರ ಬಗ್ಗೆ ಬೇಸರ ಇದ್ದ ಕಾರಣ ರಾಜೀನಾಮೆ ನೀಡಲಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ನಿರ್ಧಾರ ಬದಲಿಸಬೇಕಾಯಿತು ಎಂದರು.

Leave a Reply

Your email address will not be published. Required fields are marked *