ಪಕ್ಷಾಂತರ ನಿಷೇಧ ಕಾಯಿದೆಯಡಿ ಕ್ರಮ ಜರುಗಿಸುವುದಾಗಿ ಅತೃಪ್ತರಿಗೆ ಎಚ್ಚರಿಕೆ ! ಇಂದು ಸರ್ಕಾರದ ಭವಿಷ್ಯ ನಿರ್ಧಾರ

ನ್ಯೂಸ್ ಕನ್ನಡ ವರದಿ : ರಾಜ್ಯ ರಾಜಕಾರಣದ ಕ್ಷಿಪ್ರ ಬೆಳವಣಿಗೆಗಳು, ಕಾಂಗ್ರೆಸ್‌ ಮುಖಂಡರು ಮನವೊಲಿಸಲು ಪ್ರಯತ್ನಿಸಿದರೂ ಅತೃಪ್ತ ಶಾಸಕರು ಮಾತ್ರ ಯಾವುದೇ ರೀತಿಯಲ್ಲಿ ಒಪ್ಪಿಕೊಳ್ಳುವ ಮನೋಭಾವ ತೋರುತ್ತಿಲ್ಲ. ಆದ ಕಾರಣ ಅತೃಪ್ತರು ಮರಳಿ ಬಾರದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಕ್ರಮ ಜರುಗಿಸುವುದಾಗಿ ದೋಸ್ತಿ ನಾಯಕರು ಎಚ್ಚರಿಸಿದ್ದಾರೆ. ಡಿಸಿಎಂ ಜಿ.ಪರಮೇಶ್ವರ ನಿವಾಸದಲ್ಲಿ ನಡೆದ ಸಭೆಯಲ್ಲೆ ಈ ಬಗ್ಗೆ ಸಮಾಲೋಚಿಸಲಾಗಿತ್ತು.

ರಮೇಶ್‌ ಜಾರಕಿಹೊಳಿ ಹಾಗೂ ಮಹೇಶ್‌ ಕುಮಟಳ್ಳಿ ಈಗ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮತ್ತೊಂದು ದೂರು ಸಲ್ಲಿಸಲು ಕೈ ನಾಯಕರು ಯೋಚಿಸಿದ್ದಾರೆ ಎನ್ನಲಾಗಿದೆ. ಜತೆಗೆ ಮೊದಲ ಕಂತಿನಲ್ಲಿ ಇಬ್ಬರನ್ನು ಅನರ್ಹಗೊಳಿಸಿ ಅತಂತ್ರ ಸ್ಥಿತಿಯಲ್ಲಿಡುವುದು ದೋಸ್ತಿಗಳ ತಂತ್ರವಾಗಿದೆ. ಅನರ್ಹಗೊಂಡ ಶಾಸಕರು ಮುಂದಿನ ಸರಕಾರದಲ್ಲಿ ಸಚಿವರಾಗುವಂತಿಲ್ಲ,ಜತೆಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದುಬಂದರಷ್ಟೇ ಸಚಿವರಾಗುವ ಅವಕಾಶವಿದೆ. ಪರಮೇಶ್ವರ ಸೇರಿದಂತೆ ಸಚಿವರಾದ ಎಂ.ಬಿ.ಪಾಟೀಲ್‌, ಕೃಷ್ಣ ಬೈರೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕುಮಾರಕೃಪಾ ಅತಿಥಿ ಗೃಹದಲ್ಲಿ ಮತ್ತೊಂದು ಸುತ್ತಿನ ಸಭೆ ಸೇರಿ ಕಾನೂನು ಪರಾಮರ್ಶೆ ನಡೆಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರನ್ನು ತಮಿಳುನಾಡು ಮಾದರಿಯಲ್ಲಿ ಅನರ್ಹಗೊಳಿಸುವ ಬಗ್ಗೆಯೂ ಪರಿಶೀಲಿಸಲಾಯಿತು.

Leave a Reply

Your email address will not be published. Required fields are marked *