ರಾಜ್ಯಪಾಲರ ರಂಗಪ್ರವೇಶ: ರಾಜ್ಯದ ವಿದ್ಯಮಾನಗಳ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ವರದಿ!

ನ್ಯೂಸ್ ಕನ್ನಡ ವರದಿ : ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಚಿವರ ಸಾಮೂಹಿಕ ರಾಜೀನಾಮೆ ಹಾಗೂ ಮೈತ್ರಿ ಸರಕಾರಕ್ಕೆ ಪಕ್ಷೇತರ ಶಾಸಕರು ನೀಡಿದ್ದ ಬೆಂಬಲ ವಾಪಾಸ್‌ ಬೆನ್ನಲ್ಲೇ, ರಾಜ್ಯದ ಸಂಪೂರ್ಣ ವಿದ್ಯಮಾನಗಳ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ವರದಿ ಕಳುಹಿಸಿ ರಾಜ್ಯಪಾಲ ವಿ.ಆರ್‌.ವಾಲಾ ಅಖಾಡಕ್ಕೆ ಇಳಿದಿದ್ದಾರೆ. ರಾಜ್ಯದಲ್ಲಿ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾದ ದಿನದಿಂದಲೂ ಕೇಂದ್ರ ಗೃಹ ಇಲಾಖೆಗೆ ರಾಜ್ಯಪಾಲರು ವರದಿ ನೀಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪರಿಸ್ಥಿತಿಯನ್ನು ಅವಲೋಕಿಸಿ ವಿಶ್ವಾಸ ಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ರಾಜ್ಯಪಾಲರು ಸೂಚನೆ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ರಾಜಭವನ ಮೂಲಗಳು ತಿಳಿಸಿವೆ. ಶುಕ್ರವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನ ಮಂಡಲ ಅಧಿವೇಶನ ಮುಂದೂಡುವಂತೆ ಸರಕಾರ ಮನವಿ ಮಾಡಬಹುದು. ಆದರೆ ಈ ಮನವಿಗೆ ರಾಜ್ಯಪಾಲರಿಂದ ಮನ್ನಣೆ ಸಿಗುವುದು ಅನುಮಾನ. ನಿಯಮ ಪ್ರಕಾರ ಅಧಿವೇಶನ ಕರೆಯುವುದಕ್ಕೆ ಸಂಪುಟದ ಒಪ್ಪಿಗೆ ಪಡೆದು ಕಡತವನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಬೇಕು. ಅದೇ ರೀತಿ ಅಧಿವೇಶನ ಮುಂದೂಡುವುದಕ್ಕೂ ಇದೇ ಕ್ರಮ ಅನುಸರಿಸಬೇಕು. ಆದರೆ ಸಂಪುಟ ಸಭೆ ನಡೆಸದೇ ಅಧಿವೇಶನ ಮುಂದೂಡುವಂತೆ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರೂ ಕ್ರಮಬದ್ಧವಲ್ಲ ಎಂದು ಹೇಳಲಾಗುತ್ತಿದೆ. ಜತೆಗೆ 15 ಶಾಸಕರು ಸರಕಾರದ ಮೇಲೆ ವಿಶ್ವಾಸವಿಲ್ಲ ಎಂದು ಖುದ್ದು ಹೇಳಿಕೆ ನೀಡಿರುವುದರಿಂದ ರಾಜ್ಯಪಾಲರು ಈ ಮನವಿ ಒಪ್ಪುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *