ಸರ್ಕಾರ ರಚಿಸುವ ಯಡಿಯುರಪ್ಪ ಕನಸಿಗೆ ತಲೆನೋವಾಗಿ ಪರಿಣಮಿಸಿದ ಸ್ಪೀಕರ್ !​

ನ್ಯೂಸ್ ಕನ್ನಡ ವರದಿ : ಮೈತ್ರಿ ಪಕ್ಷದ 14 ಶಾಸಕರು ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕಾರ ಮಾಡದ ಹೊರತಾಗಿ ಮ್ಯಾಜಿಕ್ ಸಂಖ್ಯೆ 106ಕ್ಕೆ ಇಳಿಯುವುದು ಸಾಧ್ಯವಿಲ್ಲ. ಆದರೆ, ಸ್ಪೀಕರ್ ಇವರ ರಾಜೀನಾಮೆಯನ್ನು ಈವರೆಗೆ ಅಂಗೀಕಾರ ಮಾಡದೆ ಇರುವುದು ಅಥವಾ ರಾಜೀನಾಮೆಗೆ ಸೂಕ್ತ ಕಾರಣ ಕೇಳಲು ಅತೃಪ್ತರನ್ನು ಆಹ್ವಾನಿಸದೆ ಇರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಸಾಲು ಸಾಲು ಶಾಸಕರ ಹಾಗೂ ಸಚಿವರ ರಾಜೀನಾಮೆಯಿಂದಾಗಿ ರಾಜ್ಯದ ಸಮ್ಮಿಶ್ರ ಸರ್ಕಾರ ತಾಂತ್ರಿಕವಾಗಿ ಬಹುಮತವನ್ನು ಕಳೆದುಕೊಂಡಿದೆ.

ಇನ್ನು ಬಿಜೆಪಿ ನೂತನ ಸರ್ಕಾರ ರಚಿಸುವ ಕನಸು ಕಾಣುತ್ತಿದೆ. ಆದರೆ, ಕಮಲ ಪಾಳಯದ ಈ ಕನಸಿಗೆ ಒಂದೆಡೆ ಕೆಲ ಕಾನೂನಿನ ತೊಡಕುಗಳು ಎದುರಾದರೆ, ಸ್ಪೀಕರ್ ಕೆ.ಆರ್​. ರಮೇಶ್ ಕುಮಾರ್ ಸಹ ಮಗ್ಗುಲ ಮುಳ್ಳಾಗಿ ಕಾಡುವ ಸೂಚನೆ ನೀಡಿರುವುದು ಕಮಲ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕಾರ ಮಾಡುವ ಅಥವಾ ಮಾಡದೆ ಇರುವ ಪರಮಾಧಿಕಾರ ಸ್ಪೀಕರ್ ಅವರಿಗಿದೆ. ಹೀಗಾಗಿ ರಾಜೀನಾಮೆ ನೀಡಿರುವ ಶಾಸಕರು ಖುದ್ದಾಗಿ ಬಂದು ತಮ್ಮ ರಾಜೀನಾಮೆ ಕಾರಣ ಹೇಳಿ ಎಂದು ಸ್ಪೀಕರ್ ಅತೃಪ್ತರಿಗೆ ಆಹ್ವಾನ ಮಾಡಬಹುದು. ಇವರ ಕಾರಣ ಸಮಂಜಸವಾಗಿಲ್ಲ ಎಂದಾದರೆ ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೆಯೂ ಇರಬಹುದು. ಅಥವಾ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅತೃಪ್ತ ಶಾಸಕರ ಶಾಸಕ ಸ್ಥಾನವನ್ನೇ ಅನೂರ್ಜಿತಗೊಳಿಸಬಹುದು. ಸ್ಪೀಕರ್ ಅವರ ಇಂತಹ ಯಾವುದೇ ನಿರ್ಧಾರ ಬಿಜೆಪಿಯ ಕನಸಿಗೆ ಮುಳ್ಳಾಗುವುದರಲ್ಲಿ ಎರಡು ಮಾತಿಲ್ಲ. ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಇಂತಹ ತೀರ್ಮಾನಗಳಿಗೆ ಮುಂದಾಗುವ ಮುನ್ನವೇ ವಿರೋಧ ಪಕ್ಷಗಳು ಅವರ ವಿರುದ್ಧ ಅವಿಶ್ವಾ ನಿರ್ಣಯ ಮಂಡನೆ ಮಾಡಿ ಅವರನ್ನು ಸ್ಪೀಕರ್ ಸ್ಥಾನದಿಂದ ಕೆಳಗಿಸುವುದಕ್ಕೂ ಅವಕಾಶವಿದೆ.

Leave a Reply

Your email address will not be published. Required fields are marked *