ಸಂವಿಧಾನವೇ ನನ್ನ ನಾಯಕ, ನಾನು ಇಡುವ ಹೆಜ್ಜೆ ಇತಿಹಾಸವಾಗುತ್ತೆ: ಸ್ಪೀಕರ್ ರಮೇಶ್ ಕುಮಾರ್ !
ನ್ಯೂಸ್ ಕನ್ನಡ ವರದಿ : ಸ್ಪೀಕರ್ ಅಂಗಳದಲ್ಲಿ ಮೈತ್ರಿ ಸರ್ಕಾರದ ಭವಿಷ್ಯ ನಿಂತಿದ್ದು, ರಮೇಶ್ ಕುಮಾರ್ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಈ ಕುರಿತು ಮಾತನಾಡಿದ ಸ್ಪೀಕರ್, ಶಾಸಕ ಸ್ಥಾನ ತೊರೆದಿರುವ 13 ಅತೃಪ್ತ ನಾಯಕರ ವಿರುದ್ಧ ಈಗ ನಾನು ಇಡುವ ಹೆಜ್ಜೆ ಇತಿಹಾಸವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನಿಕ ಬದ್ಧವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಶನಿವಾರ ಶಾಸಕ ಸ್ಥಾನಕ್ಕೆ ಸಾಲು ಸಾಲಾಗಿ ರಾಜೀನಾಮೆ ನೀಡಿದ 13 ಜನ ರೆಬೆಲ್ ನಾಯಕರ ಭವಿಷ್ಯ ಕುರಿತು ಮಂಗಳವಾರ ಕಾನೂನಾತ್ಮಕವಾಗಿ ನಾನು ತೀರ್ಮಾನ ಮಾಡುತ್ತೇನೆ ಎಂದಿದ್ದರು. ಅದರಂತೆ ಇಂದು ತಮ್ಮ ಕಚೇರಿಗೆ ಆಗಮಿಸಿರುವ ಅವರು ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಯಾವ ಕ್ರಮಕ್ಕೆ ಮುಂದಾಗಲಿದ್ದಾರೆ ಎಂದು ನೋಡಬೇಕಾಗಿದೆ.
ರಾಜೀನಾಮೆ ಪತ್ರ ಪರಿಶೀಲನೆಗೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಕಚೇರಿಯಲ್ಲಿ ಇಲ್ಲದಿರುವಾಗ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ರಾಜೀನಾಮೆ ಪತ್ರ ಪರಿಶೀಲಿಸುತ್ತೇನೆ. ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಾಜೀನಾಮೆ ನೀಡಿದ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಲಾಗುವುದು. ಈ ವಿಚಾರವಾಗಿ ತುರ್ತಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಜನರಿಗೆ ನಾನು ಜವಾಬ್ದಾರಿಯಾಗಿದ್ದು, ಅವರೇ ನನ್ನ ನಾಯಕರು. ಯಾವುದೇ ಹಿತಾಸಕ್ತಿಗೆ ಒಳಗಾಗದೆ ನಾನು ಕಾರ್ಯನಿರ್ವಹಿಸುತ್ತೇನೆ. ಈಗ ನಾನು ಇಡುವ ಹೆಜ್ಜೆ ಇತಿಹಾಸವಾಗುತ್ತೆ. ನನಗೆ ಯಾರೂ ನಾಯಕರಿಲ್ಲ. ನನಗೆ ಸಂವಿಧಾನವೇ ನಾಯಕ. ಆ ಮೂಲಕವೇ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ ಎಂದರು.