ಸೌಮ್ಯ ರೆಡ್ಡಿ ಮನವೊಲಿಕೆ ಸಕ್ಸಸ್!: ರಾಜೀನಾಮೆ ಹಿಂಪಡೆಯಲಿದ್ದಾರೆಯೇ ರಾಮಲಿಂಗ ರೆಡ್ಡಿ?
ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ : ಸೌಮ್ಯಾ ರೆಡ್ಡಿಗೆ ಮನವೊಲಿಸಿದ ಸೋನಿಯಾ ಗಾಂಧಿ !
ನ್ಯೂಸ್ ಕನ್ನಡ ವರದಿ : ಸೋಮವಾರ ನವದೆಹಲಿಯಲ್ಲಿ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಸೌಮ್ಯ ರೆಡ್ಡಿ, ತಮ್ಮ ಅಹವಾಲುಗಳನ್ನೂ ಹೇಳಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಸೋನಿಯಾ ಗಾಂಧಿ ಸಮಸ್ಯೆಗಳಿಗೆ ಪರಿಹಾರ ಹುಡುಕವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸುಮಾರು 15 ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ, ಪಕ್ಷನಿಷ್ಠೆಗೆ ಕಾಂಗ್ರೆಸ್ನಲ್ಲಿ ಬೆಲೆ ಇದೆ. ಮುಂದೆ ಎಲ್ಲರಿಗೂ ಒಳ್ಳೆಯ ಭವಿಷ್ಯ ಇದೆ ಎಂದು ಸೋನಿಯಾ ಅಭಯ ನೀಡಿದ್ದು, ಇದರಿಂದ ಸೌಮ್ಯ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಒಂದೊಮ್ಮೆ ಸೌಮ್ಯ ರೆಡ್ಡಿ ತಮ್ಮ ತಂದೆ ರಾಮಲಿಂಗಾ ರೆಡ್ಡಿಯವರನ್ನು ರಾಜೀನಾಮೆ ವಾಪಸ್ ತೆಗೆದುಕೊಳ್ಳುವಂತೆ ಮನವೊಲಿಸಿದರೆ, ರಾಮಲಿಂಗ ರೆಡ್ಡಿ ಅಂಡ್ ಟೀಂ ರಾಜೀನಾಮೆ ವಾಪಸ್ ಪಡೆಯುವ ನಿರೀಕ್ಷೆಯಿದೆ. ಇದರ ಮೇಲೆ ಮೈತ್ರಿ ಸರ್ಕಾರದ ಅಳಿವು-ಉಳಿವು ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.
ಪತನದ ಅಂಚಿನತ್ತ ಸಾಗುತ್ತಿರುವ ಸಮ್ಮಿಶ್ರ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳುವ ಪಣತೊಟ್ಟಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಹರಸಾಹಸ ಪಡುತ್ತಿದ್ದಾರೆ. ಏತನ್ಮಧ್ಯೆ, ದೆಹಲಿಯಲ್ಲಿ ಭೇಟಿಯಾಗಿದ್ದ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಅವರನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮನವೊಲಿಸಿದ್ದಾರೆ. ಸೋನಿಯಾ ಜೊತೆಗಿನ ಮಾತುಕತೆ ವೇಳೆ, ಪಕ್ಷದಲ್ಲಿ ತಮ್ಮ ತಂದೆಗೆ ಆಗಿರುವ ಅನ್ಯಾಯದ ಬಗ್ಗೆಯೂ ಸೌಮ್ಯ ರೆಡ್ಡಿ ವಿವರಿಸಿದ್ದಾರೆ ಎನ್ನಲಾಗುತ್ತಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ. ನಿಮ್ಮ ತಂದೆ ರಾಮಲಿಂಗಾ ರೆಡ್ಡಿ ಅವರನ್ನೂ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಿ ಎಂದು ಸೋನಿಯಾ ಮನವಿ ಮಾಡಿದ್ದಾರೆ. ಇದರಿಂದಾಗಿ ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸೌಮ್ಯ ಹಾಜರಾಗಿದ್ದಾರೆ ಎನ್ನಲಾಗಿದೆ.