ಮುಂಬೈ: ಡಿಕೆ ಶಿವಕುಮಾರ್ ರನ್ನು ಅತೃಪ್ತರಿರುವ ಹೋಟೆಲ್ ಒಳಗೆ ತೆರಳದಂತೆ ತಡೆದ ಪೋಲಿಸ್!
ನ್ಯೂಸ್ ಕನ್ನಡ ವರದಿ: ಮುಂಬೈನಲ್ಲಿ ಅತೃಪ್ತರು ಉಳಿದಿರುವ ರೆನಿಸನ್ಸ್ ಹೋಟೆಲ್ನಲ್ಲಿ ತಂಗಿರುವ ರೆಬೆಲ್ ಶಾಸಕರನ್ನು ಭೇಟಿ ಮಾಡಲು ತೆರಳಿದ ಸಚಿವ ಡಿಕೆ ಶಿವಕುಮಾರ್ಗೆ ಹೋಟೆಲ್ ಹೊರಭಾಗದಲ್ಲೇ ಪೊಲೀಸರು ತಡೆ ನೀಡಿದ್ದಾರೆ.
ರೆನಿಸನ್ಸ್ ಹೊಟೇಲ್ನಲ್ಲಿರುವ ಅತೃಪ್ತ ಶಾಸಕರಿಂದ ರಾತ್ರೋ ರಾತ್ರಿ ಪೊಲೀಸ್ ಕಮಿಷನರ್ಗೆ ದೂರು ಸಲ್ಲಿಕೆ ಆಗಿತ್ತು. “ಡಿಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿಯಿಂದ ನಮಗೆ ಬೆದರಿಕೆ ಇದೆ. ನಾವು ವಾಸ್ತವ್ಯ ಹೂಡಿರುವ ಹೊಟೇಲ್ಗೆ ಡಿಕೆಶಿ ದಾಳಿ ಮಾಡುವ ಸಾಧ್ಯತೆ ಇದೆ. ನಾವು ಹೊಟೆಲ್ನಲ್ಲಿ ಯಾರನ್ನೂ ಭೇಟಿ ಮಾಡಲು ಇಷ್ಟ ಪಡುವುದಿಲ್ಲ. ನಮಗೆ ಯಾರೊಂದಿಗೂ ಮಾತನಾಡುವ ಅವಶ್ಯಕತೆಯೂ ಇಲ್ಲ. ನಮ್ಮ ಖಾಸಗಿತನವನ್ನು ಕಾಪಾಡಿ. ಒಂದೊಮ್ಮೆ ಹೋಟೆಲ್ಗೆ ಅವರು ಒಳ ಬರಲು ಪ್ರಯತ್ನಿಸಿದರೆ ಅದನ್ನು ತಡೆಯಬೇಕು. ಈ ಮೂಲಕ ನಮಗೆ ರಕ್ಷಣೆ ನೀಡಿ,” ಎಂದು ದೂರಿನಲ್ಲಿ ತಿಳಿಸಿದ್ದರು. ಅಂತೆಯೇ ಪೊಲೀಸರು ಡಿಕೆಶಿಯನ್ನು ಹೋಟೆಲ್ ಎದುರೇ ತಡೆದಿದ್ದಾರೆ.
ಬೆದರಿಕೆ ವಿಚಾರವಾಗಿ ಮಾತನಾಡಿದ ಡಿಕೆಶಿ, “ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ನಾವು ಒಟ್ಟಿಗೆ ಇದ್ದೇವೆ. ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ಹಾಗಾಗಿ, ಬೆದರಿಕೆ ಹಾಕುವ ಮಾತೇ ಇಲ್ಲ. ಹೋಟೆಲ್ ಒಳಗೆ ಹೋಗಲು ಬಿಡುತ್ತಿಲ್ಲ ಎಂದರೆ ಅದರ ಅರ್ಥವೇನು? ಇಲ್ಲಿ ಒಳ್ಳೆಯ ಸರ್ಕಾರ ಇದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಒಳ್ಳೆಯ ಗೆಳೆಯ. ಇದು ಹೋಟೆಲ್, ಇಲ್ಲಿ ಯಾರೂ ಬೇಕಾದರೂ ಬರಬಹುದು. ನಾನು ಇಲ್ಲಿ ರೂಮ್ ಬುಕ್ ಮಾಡಿದ್ದೇನೆ. ನನ್ನ ಗೆಳೆಯರು ಇಲ್ಲಿದ್ದಾರೆ” ಎಂದು ಹೇಳಿದರು.