ಈ ಬಾರಿಯ ಐಪಿಎಲ್ನಲ್ಲಿ 11 ಮಂದಿ ಕನ್ನಡಿಗರು ಯಾವ ಯಾವ ತಂಡದಲ್ಲಿ ಆಡಿಲಿದ್ದಾರೆ ಗೊತ್ತೇ!
ನ್ಯೂಸ್ ಕನ್ನಡ ವರದಿ: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಎಂದೇ ಹೆಸರುವಾಸಿಯಾದ ಐಪಿಎಲ್ ಹೊಸ ಆವೃತ್ತಿ ನಿನ್ನೆ ಶುಭಾರಂಭ ಗೊಂಡಿದೆ. ಕರ್ನಾಟಕದ ಹನ್ನೊಂದು ಆಟಗಾರರು 11ನೇ ಆವೃತ್ತಿಯ ಐಪಿಎಲ್ ಅಖಾಡದಲ್ಲಿದ್ದಾರೆ. ಈ ಬಾರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕನ್ನಡಿಗ ಆಟಗಾರರಿಗೆ ಬಹಳಷ್ಟು ಬೇಡಿಕೆ ಬಂದಿದ್ದು, ಹಲವು ತಂಡದ ಸ್ಟಾರ್ ಆಟಗಾರರಾಗಿ ಕನ್ನಡಿಗ ಆಟಗಾರನನ್ನೇ ನೆಚ್ಚಿಕೊಂಡಿದೆ.
ಈ ಪೈಕಿ ಬಾಲಿವುಡ್ ನಟಿ ಪ್ರೀತಿ ಝಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮಾಲೀಕತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳಲ್ಲಿ ಕರ್ನಾಟಕದ ತಲಾ ಮೂವರು ಆಟಗಾರರಿದ್ದಾರೆ. ಆದರೆ ಡೆಲ್ಲಿ ಡೇರ್ ಡೆವಿಲ್ಸ್, ಮುಂಬಯಿ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈ ಬಾರಿ ಯಾವೊಬ್ಬ ಕನ್ನಡಿಗರಿಗೂ ಅವಕಾಶ ನೀಡಿಲ್ಲ.
ಕಿಂಗ್ಸ್ ಇಲೆವೆನ್ ತಂಡದಲ್ಲಿರುವ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ಕಳೆದ ವರ್ಷ ಭುಜದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಕಾರಣ 10ನೇ ಆವೃತ್ತಿಯ ಐಪಿಎಲ್ನಿಂದ ಹೊರಗುಳಿದಿದ್ದರು. ಈ ಬಾರಿ ಕಿಂಗ್ಸ್ ಇಲೆವೆನ್ ಪರ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸಲಿರುವ ರಾಹುಲ್, ಹೊಸ ಸವಾಲಿನೊಂದಿಗೆ 11ನೇ ಆವೃತ್ತಿಯ ಟೂರ್ನಿಯನ್ನು ಎದುರು ನೋಡುತ್ತಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್: ಕೆ.ಎಲ್ ರಾಹುಲ್ ಮಾತ್ರವಲ್ಲದೇ ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿ ಭರವಸೆ ಮೂಡಿಸಿದ್ದ ಕರುಣ್ ನಾಯರ್ ಮತ್ತು ಈ ಬಾರಿಯ ದೇಶೀಯ ಪಂದ್ಯಾಟಗಳಲ್ಲಿ ದಾಖಲೆಯ ರನ್ ಹೊಳೆ ಹರಿಸಿರುವ ಮಯಾಂಕ್ ಅಗರ್ವಾಲ್ ಇದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಚ್ಚರಿಯ ಬಂಪರ್ ಬೆಲೆಗೆ ಹರಾಜಾದ ಕೆ.ಗೌತಮ್, ಚುಟುಕು ಕ್ರಿಕೆಟ್ನಲ್ಲಿ ತುಂಬಾ ಅನುಭವವಿರುವ ಸ್ಟುವರ್ಟ್ ಬಿನ್ನಿ ಮತ್ತು ಯುವ ಕ್ರಿಕೆಟಿಗ ಶ್ರೇಯಸ್ ಗೋಪಾಲ್ ಇದ್ದಾರೆ.
ಕೋಲ್ಕೊತಾ ನೈಟ್ ರೈಡರ್ಸ್ ತಂಡದಲ್ಲಿ ಕಳೆದ ಹಲವಾರು ವರ್ಷಗಳಿಂದ ಆಡುತ್ತಾ ತಂಡದ ಬ್ಯಾಟಿಂಗ್ ಆಧಾರಸ್ತಂಭಗಳಲ್ಲಿ ಒಬ್ಬರಾದ ರಾಬಿನ್ ಉತ್ತಪ್ಪ ಇದ್ದಾರೆ, ಅದೇ ರೀತಿ ಕರ್ನಾಟಕ ರಣಜಿ ತಂಡದ ಕಪ್ತಾನ ಹಾಗೂ ರಾಜ್ಯವನ್ನು ತುಂಬಾ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಆರ್ ವಿನಯ್ ಕುಮಾರ್ ಇದ್ದಾರೆ.
ರನ್ ಮೆಷೀನ್ ಎಂದೇ ಹೆಸರುವಾಸಿಯಾಗಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೇಳಲಿಕ್ಕೆ ನಮ್ಮ ರಾಜ್ಯದ ತಂಡವಾದರೂ ಇಲ್ಲಿ ಯಾವುದೇ ಸ್ಟಾರ್ ಆಟಗಾರ ಕನ್ನಡಿಗನಿಲ್ಲ, ಆದರೂ ಹೊಸ ಪ್ರತಿಭೆಗಳಾದ ಪವನ್ ದೇಶಪಾಂಡೆ ಮತ್ತು ಅನಿರುದ್ಧ ಜೋಶಿಗೆ ಈ ಬಾರಿ ಮಣೆ ಹಾಕಿದ್ದಾರೆ, ಅವರ ಸಾಮರ್ಥ್ಯವನ್ನು ಹೇಗೆ ಉಪಯೋಗಿಸುತ್ತೆ ಕಾದು ನೋಡಬೇಕಾಗಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡವು ಭಾರೀ ಜಿದ್ದಾಜಿದ್ದಿನ ಹೋರಾಟ ನಡೆಸಿ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚು ಬೆಲೆ ನೀಡಿ ಕರ್ನಾಟಕದ ಮತ್ತೊಬ್ಬ ಸ್ಟಾರ್ ಆಟಗಾರ ಮನೀಶ್ ಪಾಂಡೆಯವರನ್ನು ತಮ್ಮ ತಂಡಕ್ಕೆ ಸೇರಿಸಿದೆ.