ಮುಂಬೈ ಹೈಡ್ರಾಮ: ನಾನು ಬಿಜೆಪಿಗೆ ಹೆದರಲ್ಲ, ಒಬ್ಬನೇ ಬಂದಿದ್ದೇನೆ ಒಬ್ಬನೇ ನಿಂತು ಹೋರಾಡುತ್ತೇನೆ!: ಡಿಕೆಶಿ

ನ್ಯೂಸ್ ಕನ್ನಡ ವರದಿ: ಅತೃಪ್ತರ ಶಾಸಕರನ್ನು ಭೇಟಿ ಮಾಡಲು ಮುಂಬೈಗೆ ತೆರಳಿರುವ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಪೊಲೀಸರು ಹೋಟೆಲ್ ಒಳಗಡೆ ಬಿಡಲು ನಿರಾಕರಿಸಿದ್ದಾರೆ. ಈ ವೇಳೆ ಡಿಕೆಶಿ ಜೊತೆ ಮುಂಬೈ ಪೊಲೀಸರು ಮಾತುಕತೆ ನಡೆಸುವ ಮೂಲಕ ಭಾರೀ ಹೈಡ್ರಾಮವೇ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನನ್ನ ಸ್ನೇಹಿತರು ಈ ಹೋಟೆಲ್‍ನಲ್ಲಿದ್ದಾರೆ. ಅವರನ್ನು ಭೇಟಿ ಮಾಡಲು ಬಂದಿದ್ದೇನೆ ಹೊರತು ಯಾರಿಗೂ ನಾನು ಬೆದರಿಕೆ ಹಾಕಲು ಬಂದಿಲ್ಲ. ಹೋಟೆಲ್ ಒಳಗೆ ಬಿಡದಿದ್ದರೆ ಇಡೀ ದಿನ ಇಲ್ಲೇ ಕಾಯ್ತೀನಿ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಸಿಎಂ ಫೆರ್ನಾಂಡಿಸ್ ನನ್ನ ಸ್ನೇಹಿತ, ನಾನು ಇಲ್ಲಿ ರೂಮ್‍ ಬುಕ್ ಮಾಡಿದ್ದೇನೆ. ನನ್ನ ಕುಟುಂಬದ ಸಹೋದರರು ಇಲ್ಲಿನ ಹೋಟೆಲ್ ರೂಮ್‍ನಲ್ಲಿ ಇದ್ದಾರೆ. ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಯಾರಿಗೂ ನಾನು ಬೆದರಿಕೆ ಹಾಕಲು ಬಂದಿಲ್ಲ. ನನ್ನ ಕುಟುಂಬದಲ್ಲಿ ಸ್ವಲ್ಪ ಬಿರುಕು ಉಂಟಾಗಿದೆ. ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. ಒಂದೇ ಸರಿ ನಾವು ಬೇರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನನ್ನ ರೂಮ್ ಕೂಡ ಇದೇ ಹೋಟೆಲ್‍ನಲ್ಲಿದೆ, ಹೀಗಾಗಿ ನಾನು ಬಂದಿದ್ದೇನೆ. ಈ ಹೋಟೆಲ್‍ನಲ್ಲಿರುವ ನಾಯಕರು ಹಾಗೂ ನಾವೆಲ್ಲರೂ ಒಟ್ಟಿಗೆ ರಾಜಕೀಯ ಮಾಡಿದ್ದೇವೆ. ಮಂಗಳವಾರ ಬಿಜೆಪಿ ಅವರು ನಮ್ಮವರನ್ನು ಭೇಟಿಯಾಗಲು ಹೋಟೆಲ್‍ಗೆ ಬಂದಿದ್ದರು ಅವರನ್ನು ಹೇಗೆ ಒಳಗೆ ಬಿಟ್ರಿ ಎಂದು ಪ್ರಶ್ನಿಸಿ, ಆದರೆ ನಾವು ನಮ್ಮ ಪಕ್ಷದವರನ್ನ ಭೇಟಿಯಾಗೋದು ತಪ್ಪಾ ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಈ ಮಧ್ಯೆ ರಿನೈಸೆನ್ಸ್ ಹೋಟೆಲ್ ಗೇಟ್ ಬಂದ್ ಮಾಡಲಾಗಿದ್ದು, ಡಿಕೆಶಿ ಅವರು ಹೋಟೆಲ್ ಹೊರಗೆ ಬರುತ್ತಿದ್ದಂತೆ ಪೊಲೀಸರು ಅವರನ್ನು ಒಳಗೆ ಹೋಗದಂತೆ ತಡೆದಿದ್ದಾರೆ. ಹೀಗಾಗಿ ಪೊಲೀಸರ ಜೊತೆ ಸಚಿವರು ವಾಗ್ವಾದಕ್ಕೆ ಇಳಿದಿದ್ದರು. ಇದೇ ವೇಳೆ ಗೋಬ್ಯಾಕ್ ಡಿಕೆ ಶಿವಕುಮಾರ್ ಎಂದು ಅತೃಪ್ತ ನಾಯಕರ ಬೆಂಬಲಿಗರು ಘೋಷಣೆ ಕೂಗುತ್ತಿದ್ದಾರೆ. ಆದರೆ ಯಾರು ಏನು ಬೇಕಾದರೂ ಮಾಡಲಿ, ಗೋ ಬ್ಯಾಕ್ ಎಂದಾದರೂ ಹೇಳಲಿ, ಗೋ ಎಸ್ ಎಂದಾದರೂ ಹೇಳಲಿ. ನಾನೂ ಈ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದೇನೆ. ಇಡೀ ದಿನಾ ಇಲ್ಲೆ ಇರುತ್ತೇನೆ, ಬಿಜೆಪಿಗೆ ಹೆದರಲ್ಲ, ಒಬ್ಬನೇ ಹೋರಾಡುತ್ತೇನೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *