ಸಂಕಷ್ಟದಲ್ಲಿ ಮೈತ್ರಿ ಸರ್ಕಾರ: ಎಂಟಿಬಿ ನಾಗರಾಜ್ ಮತ್ತು ಸುಧಾಕರ್ ರಾಜೀನಾಮೆ..!
ನ್ಯೂಸ್ ಕನ್ನಡ ವರದಿ: ಅತ್ತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಸ್ಪೀಕರ್ ಕಚೇರಿಗೆ ಆಗಮಿಸಿದ ಸಚಿವ ಎಂ.ಟಿ.ಬಿ.ನಾಗರಾಜ್ ಹಾಗೂ ಶಾಸಕ ಸುಧಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ 2-3ದಿನಗಳಿಂದ ಹರಿದಾಡುತ್ತಿದ್ದ ಇವರ ರಾಜೀನಾಮೆ ವರದಿ ಇಂದು ಬಹಿರಂಗಗೊಂಡಿದ್ದು, ಮಧ್ಯಾಹ್ನ 4 ಗಂಟೆ ವಿಧಾನಸೌಧಕ್ಕೆ ಆಗಮಿಸಿದ ಸಚಿವ ಎಂ.ಟಿ.ಬಿ.ನಾಗರಾಜು ಮತ್ತು ಶಾಸಕ ಸುಧಾಕರ್ ನೇರವಾಗಿ ಪೊಲೀಸ್ ಭದ್ರತೆಯಲ್ಲಿ ಸ್ಪೀಕರ್ ಕಚೇರಿಗೆ ತೆರಳಿ ಸ್ವ ಬರಹದಲ್ಲಿ ಬರೆದ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಆರಂಭದಿಂದಲೂ ಕಿಡಿಕಾರುತ್ತಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಧಾಕರ್ ಬಿಜೆಪಿಗೆ ಸೇರುತ್ತಾರೆಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ, ಇತ್ತೀಚೆಗೆ ಅವರನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ದೋಸ್ತಿ ಸರ್ಕಾರ ಅಸಮಾಧಾನ ಹೊಗೆಯನ್ನು ತಣಿಸಲು ಪ್ರಯತ್ನಿಸಿತ್ತು. ಆದರೆ, ಅಚ್ಚರಿ ಎಂಬಂತೆ ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಇವರು ಗೈರು ಹಾಜರಾಗಿದ್ದರು. ಸುಧಾಕರ್ ಹಾಗೂ ಎಂ.ಟಿ.ಬಿ.ನಾಗರಾಜ್ ರಾಜೀನಾಮೆಯಿಂದ ಕಾಂಗ್ರೆಸ್ ಮತ್ತೆರೆಡು ವಿಕೆಟ್ ಕಳೆದುಕೊಂಡಂತಾಗಿದ್ದು, ಒಟ್ಟು 13 ಶಾಸಕರು ರಾಜೀನಾಮೆ ನೀಡಿದಂತಾಗಿದೆ.