ಫಲ ನೀಡದ ಜಡೇಜ ಧೋನಿ ಹೋರಾಟ: ವಿಶ್ವಕಪ್ ಸಮಿಫೈನಲ್ ನಲ್ಲಿ ಭಾರತಕ್ಕೆ ಸೋಲು!

ನ್ಯೂಸ್ ಕನ್ನಡ ವರದಿ ಮ್ಯಾಂಚೆಸ್ಟರ್: ಮಳೆಯಿದ್ದ ಸ್ಥಗಿತಗೊಂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತವನ್ನು 18 ರನ್‍ಗಳಿಂದ ಸೋಲಿಸಿ  ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಗೆಲ್ಲಲು 240 ರನ್ ಗಳ ಗುರಿಯನ್ನು ಪಡೆದ ಭಾರತ 49.3 ಓವರ್ ಗಳಲ್ಲಿ 221 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‍ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಜಡೇಜಾ ಮತ್ತು ಧೋನಿ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಹತ್ತಿರ ತಂದಿಟ್ಟಿದ್ದರು.

ಕಿವೀಸ್ ಇನ್ನಿಂಗ್ಸ್ ಬಳಿಕ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ತಂಡದ ಪರ ಆರಂಭಿಕರಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಲಾ 1 ರನ್ ಗಳಿಸಿ ನಿರ್ಗಮಿಸಿದ್ದರು. ಇದರ ಬೆನ್ನಲ್ಲೇ ರಕ್ಷಣಾತ್ಮಕ ಆಟಕ್ಕೆ ಮುಂದಾದ ದಿನೇಶ್ ಕಾರ್ತಿಕ್ 25 ಎಸೆತಗಳಲ್ಲಿ 6 ರನ್ ಗಳಿಸಿ ಹೆನ್ರಿ ಅವರಿಗೆ 3ನೇ ಬಲಿಯಾಗಿ ನಿರ್ಗಮಿಸಿದರು.

ಆರಂಭಿಕ ವೈಫಲ್ಯ: ಕೊಹ್ಲಿ ಪಡೆಗೆ ಅಘಾತ ನೀಡಿದ ಕಿವೀಸ್ ಬೌಲರ್ ಲ್ಯಾಥಮ್ ಹೆನ್ರಿ, ರೋಹಿತ್, ರಾಹುಲ್ ವಿಕೆಟ್ ಪಡೆದು ಅಘಾತ ನೀಡಿದರು. ಇತ್ತ ಬೋಲ್ಟ್ ನಾಯಕ ಕೊಹ್ಲಿ ಅವರನ್ನು ಎಲ್‍ಬಿ ಡಬ್ಲೂ ಬಲೆಗೆ ಕೆಡವಿದರು. ಪರಿಣಾಮ ಟೀಂ ಇಂಡಿಯಾ 3.1 ಓವರ್ ಗಳಲ್ಲಿ ಕೇವಲ 3 ರನ್ ಗಳಿಗೆ 5 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ತಂಡವೊಂದರ ಟಾಪ್ 3 ಆಟಗಾರರು ತಲಾ 1 ರನ್ ಗಳಿಸಿ ಔಟಾಗಿದ್ದು ಇದೇ ಮೊದಲ ಬಾರಿಗೆ ಆಗಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ವಿಶ್ವಕಪ್ ಟೂರ್ನಿಯ 3 ಸೆಮಿಫೈನಲ್ ಪಂದ್ಯದಲ್ಲಿ ಎಡಗೈ ವೇಗಿ ಬೌಲರ್ ಗಳಿಗೆ ಔಟಾಗಿದ್ದಾರೆ. ಅಲ್ಲದೇ ಮೂರು ಪಂದ್ಯಗಳಲ್ಲಿ ಕೇವಲ 11 ರನ್ ಗಳಿಸಿದ್ದಾರೆ. 2011ರ ವಿಶ್ವಕಪ್ ಸೆಮಿ ಫೈನಲ್‍ನಲ್ಲೂ ಪಾಕಿಸ್ತಾನ ಎಡಗೈ ವೇಗಿ ವಯಾಬ್ ರಿಯಾಜ್ ಅವರಿಗೆ ವಿಕೆಟ್ ಒಪ್ಪಿಸಿದ್ದರು. 2015ರ ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಆಸೀಸ್ ತಂಡದ ವಿರುದ್ಧ ಮಿಚೆಲ್ ಜಾನ್ಸನ್ ಅವರ ಬೌಲಿಂಗ್‍ನಲ್ಲಿ ಔಟಾಗಿದ್ದರು.

ಇನ್ನಿಂಗ್ಸ್ ನ 10 ಓವರ್ ಗಳ ಅಂತ್ಯದ ವೇಳೆ 4 ವಿಕೆಟ್ ಕಳೆದುಕೊಂಡು 24 ರನ್ ಗಳಿಸಿದ್ದ ಟೀಂ ಇಂಡಿಯಾ 2019 ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯವೊಂದರ ಪವರ್ ಪ್ಲೇನಲ್ಲಿ ಗಳಿಸಿದ ಅತಿ ಕಡಿಮೆ ಮೊತ್ತ ಇದಾಗಿದೆ. ಈ ಸಂದರ್ಭದಲ್ಲಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಯುವ ಆಟಗಾರ ರಿಷಬ್ ಪಂತ್ ಅನಗತ್ಯ ಹೊಡೆತಕ್ಕೆ ಕೈ ಹಾಕಿ 56 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 32 ರನ್ ಗಳಿಸಿ ಸ್ಯಾಂಟನರ್ ಗೆ ವಿಕೆಟ್ ಒಪ್ಪಿಸಿದರು.  ಪಾಂಡ್ಯ- ರಿಷಬ್ ಪಂತ್ ಜೋಡಿ 5ನೇ ವಿಕೆಟ್‍ಗೆ 47 ರನ್ ಜೊತೆಯಾಟ ನೀಡಿತ್ತು. ಈ ಹಂತದಲ್ಲಿ ಮತ್ತೆ ದಾಳಿಗಳಿಸಿದ ಸ್ಯಾಂಟನರ್ 62 ಎಸೆತಗಳಲ್ಲಿ 2 ಬೌಂಡರಿ ಸಹಿತ 32 ರನ್ ಗಳಿಸಿದ್ದ ಪಾಂಡ್ಯ ವಿಕೆಟ್ ಪಡೆದರು.

ಧೋನಿ-ಜಡೇಜಾ ಜೊತೆಯಾಟ: ಟೀಂ ಇಂಡಿಯಾ 30.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟದ ಸಂದರ್ಭದಲ್ಲಿ ಒಂದಾದ ಮಾಜಿ ನಾಯಕ ಧೋನಿ ಹಾಗೂ ಜಡೇಜಾ ತಂಡವನ್ನು ಗೆಲುವಿನತ್ತ ಕರೆತರಲು ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಭಾರತಕ್ಕೆ 117 ಎಸೆತಗಳಲ್ಲಿ 148 ರನ್ ಗಳಿಸುವ ಅಗತ್ಯವಿತ್ತು.

ಜಡೇಜಾ ಮಿಂಚು: ಟೂರ್ನಿಯಲ್ಲಿ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದ ಜಡೇಜಾ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದರು. 39 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಗಳಿಂದ ಅರ್ಧ ಶತಕ ಪೂರ್ಣಗೊಳಿಸಿದರು. ಆ ಮೂಲಕ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ನಲ್ಲಿ ನಂ.8ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಅರ್ಧ ಶತಕ ಬ್ಯಾಟ್ಸ್ ಮನ್ ಸಿಡಿಸಿದ ಸಾಧನೆ ಮಾಡಿದರು. 5 ವರ್ಷಗಳ ಬಳಿಕ ಜಡೇಜಾ ಗಳಿಸಿದ ಏಕದಿನ ಅರ್ಧ ಶತಕ ಇದಾಗಿದೆ.

5 ಓವರ್ ಗಳಲ್ಲಿ 52 ರನ್ ಗಳಿಸುವ ಒತ್ತಡದಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ಜಡೇಜಾ ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯುವ ಪ್ರಯತ್ನ ನಡೆಸಿದರು. 46ನೇ ಓವರಿನಲ್ಲಿ ಬೌಂಡತಿ ಸಮೇತ 10 ರನ್ ಗಳಿಸಿದ ಈ ಜೋಡಿ 7ನೇ ವಿಕೆಟ್‍ಗೆ ಶತಕದ ಜೊತೆಯಾಟ ನೀಡಿದರು. 122 ಎಸೆತಗಳಲ್ಲಿ ಈ ಜೋಡಿ 116 ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್‍ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸೆಯಾಗಿದ್ದ ಧೋನಿ 50 ರನ್(72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ರನೌಟ್ ಆದರು. ಈ ಹಂತದಲ್ಲಿ ಟೀಂ ಇಂಡಿಯಾಗೆ ತಂಡದ ಗೆಲುವಿಗೆ 24 ರನ್ ಗಳ ಅಗತ್ಯವಿತ್ತು. ನ್ಯೂಜಿಲೆಂಡ್ ಪರ ಬೋಲ್ಟ್ 2 ವಿಕೆಟ್ ಪಡೆದರೆ, ಹೆನ್ರಿ 3 ವಿಕೆಟ್, ಸ್ಟಾನ್ನರ್ 2 ವಿಕೆಟ್ , ಫಾರ್ಗೂಸನ್ 1 ವಿಕೆಟ್ ಪಡೆದರು.

ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿದ್ದ ಟೀಂ ಇಂಡಿಯಾ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲೂ ನಿರಸ ಪ್ರದರ್ಶನ ನೀಡಿದೆ. ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿ 179 ರನ್ ಗಳಿಗೆ ಅಲೌಟ್ ಆಗಿತ್ತು. ಗುರಿ ಬೆನ್ನತ್ತಿದ್ದ ಕಿವೀಸ್ ಪಡೆ 4 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿ ಜಯ ಪಡೆದಿತ್ತು.

2015ರ ವಿಶ್ವಕಪ್ ಫೈನಲ್‍ನಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್‍ಗಳಿಂದ ಜಯಗಳಿಸಿ ಟ್ರೋಫಿ ಗೆದ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 45 ಓವರ್ ಗಳಲ್ಲಿ 183 ರನ್ ಗಳಿಗೆ ಆಲೌಟ್ ಆಗಿದ್ದರೆ ಆಸ್ಟ್ರೇಲಿಯಾ 33.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು.

Leave a Reply

Your email address will not be published. Required fields are marked *