ಗೂಂಡಾಗಿರಿ ಮಾಡುತ್ತಿರುವುದು ಬಿಜೆಪಿಯೇ ಹೊರತು, ಕಾಂಗ್ರೆಸ್ ಅಲ್ಲ : ಕಿಡಿಕಾರಿದ ಸಿದ್ದರಾಮಯ್ಯ !
ನ್ಯೂಸ್ ಕನ್ನಡ ವರದಿ : ಶಾಸಕರಿಬ್ಬರು ರಾಜೀನಾಮೆ ಕೊಟ್ಟು ಬರುವಾಗ, ಕೆ.ಸುಧಾಕರ್ನನ್ನು ಕಾಂಗ್ರೆಸ್ ನಾಯಕರು ತಡೆದು ಹಲ್ಲೆ ಮಾಡಿದ್ದಾರೆ. ಆನಂತರ ಜಾರ್ಜ್ ಕೊಠಡಿಯಲ್ಲಿ ಕೂಡಿ ಹಾಕಿ ಅವರ ಮೇಲೆ ಗೂಂಡಾಗಿರಿ ಮಾಡಲಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಸ್ಪೀಕರ್ ಕೂಡ ಇಷ್ಟೆಲ್ಲ ಮಾಡಿದ್ರೂ ಮನೆಗೆ ಹೋಗುತ್ತಾರೆ. ತಕ್ಷಣ ಸುಧಾಕರ್ ಅವರನ್ನು ಬಿಡಬೇಕು. ಅಧಿಕಾರ ಉಳಿಸಿಕೊಳ್ಳಲು ಈ ಗೂಂಡಾಗಿರಿ ಮಾಡದೇ ತಕ್ಷಣ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು. ಇದು ಪುನರಾವರ್ತನೆ ಆದರೆ ಬಹುಶಃ ನಾವೂ ಇದಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಯಡಿಯೂರಪ್ಪ ಆಕ್ರೋಶ ಹೊರಹಾಕಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯರವರು ಕಾಂಗ್ರೆಸ್ ಶಾಸಕ ಸುಧಾಕರ್ಗೂ ಬಿಜೆಪಿಗೂ ಏನು ಸಂಬಂಧ ? ಸುಧಾಕರ್ನನ್ನು ಸಮಾಧಾನ ಮಾಡಲಿಕ್ಕಾಗಿ ನಮ್ಮ ಶಾಸಕರು ಕರೆದುಕೊಂಡು ಬಂದಿದ್ದಾರೆ. ಇಲ್ಲಿ ಯಾರು ಸುಧಾಕರ್ ಮೇಲೆ ಗೂಂಡಾಗಿರಿ ಮಾಡಿಲ್ಲ. ಗೂಂಡಾಗಿರಿ ಮಾಡುತ್ತಿರುವುದು ಬಿಜೆಪಿಯೇ ಹೊರತು, ಕಾಂಗ್ರೆಸ್ ಅಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಸುಧಾಕರ್ ಬಿಜೆಪಿ ಶಾಸಕರಲ್ಲ. ಅವರು ರಾಜೀನಾಮೆ ನೀಡಿದ್ದಾರೆಯೇ ಹೊರತು, ಇನ್ನೂ ಅಂಗೀಕಾರವಾಗಿಲ್ಲ. ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡುವತನಕ ಸುಧಾಕರ್ ಕಾಂಗ್ರೆಸ್ ಶಾಸಕರೇ ಆಗಿರುತ್ತಾರೆ. ಬಿಜೆಪಿ ಶಾಸಕರು ರೌಡಿಗಳು. ಅವರ ವರ್ತನೆಯನ್ನು ನಾನು ಖಂಡಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ. ಕಾಂಗ್ರೆಸ್-ಜೆಡಿಎಸ್ ನಾಯಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇದೆ. ಹಣದ ಆಮೀಷ ಒಡ್ಡುವ ಮೂಲಕ ಬೆದರಿಕೆ ಹಾಕಿ ಕುದುರೆ ವ್ಯಾಪರ ಮಾಡುತ್ತಿದ್ದಾರೆ. ಐಟಿ ಮತ್ತು ಇಡಿ ದಾಳಿ ನಡೆಸುತ್ತೇವೆ ಎಂದು ಶಾಸಕರನ್ನು ಖರೀದಿಸಿದ್ದಾರೆ. ಇದು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ನಾವು ಈ ಗೂಂಡಾಗಳಿಗೆ ಹೆದರುವುದಿಲ್ಲವೆಂದು ಕಟುಕಿದರು.