ಸಿಎಂ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟದ ಪ್ರಮುಖ ನಿರ್ಧಾರಗಳೇನು ಗೊತ್ತೇ?
ನ್ಯೂಸ್ ಕನ್ನಡ ವರದಿ: ರಾಜ್ಯದ 30 ಜಿಲ್ಲಾ ಪಂಚಾಯತ್ಗಳು ಮತ್ತು 177 ತಾಲ್ಲೂಕು ಪಂಚಾಯತ್ಗಳ ರಾಜ್ಯ ಹಣಕಾಸು ಆಯೋಗದ ಅರ್ನಿಬಂಧಿತ ಅನುದಾನವನ್ನು ಹೆಚ್ಚಳ ಮಾಡಲು ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಕೃಷ್ಣಬೈರೇಗೌಡ ಹೇಳಿದ್ದಾರೆ.
ಅವರು ಇಂದು ಸಚಿವ ಸಂಪುಟ ಸಭೆಯ ನಂತರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. 2019-20ನೇ ಸಾಲಿನ ಆರ್ಥಿಕ ವರ್ಷದಿಂದ 30 ಜಿಲ್ಲಾ ಪಂಚಾಯತ್ಗಳಲ್ಲಿ ಜನಸಂಖ್ಯೆ ಮತ್ತು ಭೌಗೋಳಿಕ ವಿಸ್ತಿರ್ಣವನ್ನು ಆಧರಿಸಿ ಅದರ ಆಧಾರದ ಮೇಲೆ ಕನಿಷ್ಟ 4 ಕೋಟಿ ಗಳಿಂದ ಗರಿಷ್ಠ 8 ಕೋಟಿಯ ವರೆಗೆ ಅನುದಾನ ಹಂಚಿಕೆ ಮಾಡಲಾಗುವುದು. ಇದಕ್ಕೆ 172.07 ಕೋಟಿ ಅನುದಾನ ನಿಗದಿಗೊಳಿಸಲಾಗಿದೆ.
ಇದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು. ಹಾಗೆಯೇ 177 ತಾಲ್ಲೂಕುಗಳಿಗೆ 2019-20ನೇ ಸಾಲಿಗೆ ಸಮನಾಗಿ ಈಗ ನೀಡುತ್ತಿರುವ 1 ಕೋಟಿಯ ಬದಲಾಗಿ 2 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡಲಾಗುವುದು. 2020-21 ರಿಂದ ಕನಿಷ್ಠ 2 ಕೋಟಿ ಯಿಂದ ಗರಿಷ್ಠ 3 ಕೋಟಿ ರೂ.ಗಳ ವರೆಗೆ ಜನಸಂಖ್ಯೆ ಹಾಗೂ ಭೌಗೋಳಿಕ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು. ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಈ ಕೆಳಕಂಡಂತಿದೆ.
# ರಾಜ್ಯದ 24 ಜಿಲ್ಲೆಗಳಲ್ಲಿ ಕೃಷಿ ಬೆಳೆಗಳಿಗೆ ಹನಿ ನೀರಾವರಿ ಘಟಕಗಳ ಅಳವಡಿಕೆಗಾಗಿ ಎಲ್ಲಾ ವರ್ಗದ ರೈತರಿಗೆ ಸಹಾಯಧನ ನೀಡಲು ನಬಾರ್ಡ್ ನಿಂದ 20 ಕೋಟಿ ರೂ.ಗಳ ಯೋಜನೆಯನ್ನು ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
# ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿಯಲ್ಲಿ ಈಗಾಗಲೇ ಅನುಮೋದನೆಗೊಂಡಿರುವ ಕ್ರಿಯಾಯೋಜನೆಯಂತೆ ರಸ್ತೆಗಳಿಗೆ ವೈಟ್ಟ್ಯಾಪಿಂಗ್ ಮಾಡಲು 146.97 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
# ಪರಿಶಿಷ್ಟ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎನ್ನುವ ಬಗ್ಗೆ ಪರಿಶೀಲಿಸಿ ತೀರ್ಮಾನಕೈಗೊಳ್ಳಲು ಆಯೋಗ ರಚಿಸಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.
# ಕೃಷ್ಣಾ ಮೇಲ್ದಂಡೆ ಯೋಜನೆಯ 2ನೇ ಹಂತದ ನಾರಾಯಣಪುರ ಬಲದಂಡೆ ಕಾಲುವೆ ಕಿಲೋ ಮೀಟರ್ 0.00 ರಿಂದ 95.00 ವೆರೆಗೆ ಕಾಲುವೆ ಜಾಲವನ್ನು ಆಧುನೀಕರಣಗೊಳಿಸುವ ಕಾಮಗಾರಿಗೆ 750 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ಮತ್ತು ಮೊದಲ ಹಂತದಲ್ಲಿ 375 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
# ಸಿರಿದಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ರೈತ ಸಿರಿ ಎಂಬ ಹೊಸ ಯೋಜನೆಯನ್ನು ರೂಪಿಸಿದ್ದು, ಸಿರಿದಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ 10,000 ರೂ.ಗಳ ಪ್ರೋತ್ಸಾಹ ಧನವನ್ನು 2 ಹೆಕ್ಟೇರ್ಗೆ ಸೀಮಿತಗೊಳಿಸಿ ನೀಡಲಾಗುವುದು.
# ಆಲೂಗಡ್ಡೆ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಆಲೂಗಡ್ಡೆ ಬೆಳೆಯುವ ರೈತರ ಪ್ರೋತ್ಸಾಹಧನ ಎಂಬ ಹೊಸ ಘಟಕವನ್ನು ರೂಪಿಸಿದ್ದು, ಆಲೂಗಡ್ಡೆ ಬೆಳೆಯುವ ರೈತರಿಗೆ ಆಲೂಗಡ್ಡೆ ಬಿತ್ತನೆ ಬೀಜ ಖರೀದಿಸಲು ಪ್ರತಿ ಹೆಕ್ಟೇರ್ಗೆ ರೂ 7,500 ಹಾಗೂ ಸಸ್ಯ ಸಂರಕ್ಷಣಾ ಔಷಧಿ ಖರೀದಿಗೆ ಪ್ರತಿ ಹೆಕ್ಟೇರ್ಗೆ ರೂ. 7,200 ರಂತೆ ಒಟ್ಟು 14,700 ಗಳ ಪ್ರೋತ್ಸಾಹಧನ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
# ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೂರನೇ ಹಂತದ ದೂತನೂರು ಕಾವಲ್ ಗ್ರಾಮದ ಬಳಿ ದಂಡಿಗನಹಳ್ಳಿ ಶಾಖಾ ನಾಲೆಯಿಂದ 267 ಎಂ.ಸಿ.ಎಫ್.ಟಿ ನೀರನ್ನು ಎತ್ತಿ ನೀರಾವರಿ ಕಲ್ಪಿಸುವ 141.50 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ.
# ಬೆಂಗಳೂರು ನಗರ ಹೆಬ್ಬಾಳ ನಾಗವಾರ (ಎಚ್.ಸಿ. ವ್ಯಾಲಿ) ಕಣಿವೆಯ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 65 ಕೆರೆಗಳಿಗೆ ತುಂಬಿಸುವ, ಎರಡನೇ ಹಂತದಲ್ಲಿ ಬಾಗೇಪಲ್ಲಿ ತಾಲ್ಲೂಕಿನ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 70 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿದೆ.
# ಹೆಸರುಘಟ್ಟಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಹಾಗೂ ಅದರಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಶುದ್ಧೀಕರಿಸಲು ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡುವ ಸಲುವಾಗಿ 37.28 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
# ಆಂಧ್ರಪ್ರದೇಶದ ತಿರುಮಲದಲ್ಲಿ ಇರುವ ಕರ್ನಾಟಕ ರಾಜ್ಯ ಛತ್ರದ ಆವರಣದಲ್ಲಿ ಹೊಸದಾಗಿ ಅತಿಥಿಗೃಹ ನಿರ್ಮಾಣ ಮಾಡಲು 26 ಕೋಟಿ ರೂ.ಗಳ ಅನುದಾನವನ್ನು ಒದಗಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
# ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣಕ್ಕೆ 24/7 ನೀರು ಸರಬರಾಜು ಮಾಡುವ ಯೋಜನೆಗೆ 95 ಕೋಟಿ ರೂ.ಗಳ ಅನುದಾನವನ್ನು ಒದಗಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
# ಬೆಂಗಳೂರು ಜಿಲ್ಲೆಯ ಬೆಂಗಳೂರು ಉತ್ತರ ತಾಲ್ಲೂಕಿನ ಗಾಣಿಗರ ಹಳ್ಳಿ ಕೆರೆಯ ಸೌಂದರೀಕರಣ ಕಾಮಗಾರಿಗೆ 13 ಕೋಟಿ ರೂ.ಗಳ ಅನುದಾನವನ್ನು ಒದಗಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
# ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ಮತ್ತು ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ತೋಟಗಾರಿಕೆ ಮಹಾವಿದ್ಯಾಲಯವನ್ನು ಸ್ಥಾಪನೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
# ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಲೋಕಪಾವನಿ ನದಿಯಿಂದ ಸುಂಕಾತೊಣ್ಣೂರು ಕೆರೆ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸಲು 30 ಕೋಟಿ ರೂ.ಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
# ರಾಮನಗರ ಜಿಲ್ಲೆ ರಾಮನಗರ ತಾಲ್ಲೂಕು ಬೈರಮಂಗಲ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಗಳ ಅಭಿವೃದ್ಧಿಗಾಗಿ 106 ಕೋಟಿ ರೂ.ಗಳ ಮೊತ್ತದ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.
# ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣಕ್ಕೆ ತುರವಿಹಳ್ಳ ಹತ್ತಿರ ತುಂಗಭದ್ರ ಎಡದಂಡೆ ಕಾಲುವೆ ಮೂಲದಿಂದ ನೀರು ಸರಬರಾಜು ವ್ಯವಸ್ಥೆ ಒದಗಿಸುವ ಯೋಜನೆಗೆ 88.16 ಕೋಟಿ ರೂ.ಗಳ ಅನುದಾನ ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
# ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೆಲುಕೋಟೆಯಲ್ಲಿರುವ ಕಲ್ಯಾಣಿಗಳ ಪುನರುಜ್ಜೀವನ ಮತ್ತು ಸೌಂದರ್ಯಿಕರಣಕ್ಕಾಗಿ 32 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.