ಮೈತ್ರಿ ಪಕ್ಷದ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿವೆ! ಹಾಗಾದ್ರೆ ವಿಪ್ ಅಂದರೇನು? ಇಲ್ಲಿದೆ ಡೀಟೇಲ್ಸ್

ನ್ಯೂಸ್ ಕನ್ನಡ ವರದಿ: ಅತೃಪ್ತ ಶಾಸಕರ ಸಾಮೂಹಿಕ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೀಗ ನಾಳೆಯಿಂದಲೇ ಅಧಿವೇಶನ ಶುರುವಾಗಲಿದ್ದು, ಶಾಸಕರು ಸದನದಲ್ಲಿ ಹಾಜರಿರಬೇಕು. ಜತೆಗೆ ಸರ್ಕಾರದ ಪರವಾಗಿ ಮತ ಚಲಾಯಿಸಬೇಕು ಎಂದು ಮೈತ್ರಿ ಪಕ್ಷಗಳ ಶಾಸಕರಿಗೆ ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕ ಗಣೇಶ್​ ಹುಕ್ಕೇರಿ ಅವರು ವಿಪ್​ ಜಾರಿ ಮಾಡಿದ್ದಾರೆ.

ರಾಜ್ಯ ಸರ್ಕಾರದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಒಂದು ವೇಳೆ ಸದನಕ್ಕೆ ನೀವೂ ಗೈರಾದಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುವುದು ಎಂದು ವಿಪ್​ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಧಿವೇಶನದ ವೇಳೆ ಪ್ರತಿಪಕ್ಷದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಡ್ಡಯವಾಗಿ ಹಾಜರು ಇರಬೇಕೆಂದು ವಿಪ್‌ ಜಾರಿ ಮಾಡಲಾಗಿದೆ.

ಬಿಜೆಪಿ ಮಂಡಿಸಲಿರುವ ಅವಿಶ್ವಾಸ ನಿರ್ಣಯದ ಯುದ್ಧವನ್ನು ಎದುರಿಸಲು ಕಾಂಗ್ರೆಸ್​ ಮತ್ತು ಜೆಡಿಎಸ್​​ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿವೆ. ಈ ವಿಪ್ ಎಂದರೇನು ಎಂಬ ಪ್ರಶ್ನೆ ಸಹಜವೇ. ವಿಪ್ ಎಂಬುದು ಪಕ್ಷಗಳು ತಮ್ಮ ಜನಪ್ರತಿನಿಧಿಗಳಿಗೆ ನೀಡುವ ಸೂಚನೆಯಾಗಿದೆ. ರಾಜ್ಯಸಭಾ ಚುನಾವಣೆ, ಪರಿಷತ್ ಚುನಾವಣೆ, ಅವಿಶ್ವಾಸ ನಿರ್ಣಯ ಮೊದಲಾದ ಸಂದರ್ಭಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಪಾಲ್ಗೊಳ್ಳಲು ತಮ್ಮ ಜನಪ್ರತಿನಿಧಿಗಳಿಗೆ ಪಕ್ಷಗಳು ವಿಪ್ ಜಾರಿ ಮಾಡುತ್ತವೆ.

ವಿಪ್​ನಲ್ಲಿ ಸಿಂಗಲ್ ಲೈನ್, ಡಬಲ್ ಲೈನ್ ಮತ್ತು ಥ್ರೀ ಲೈನ್ ವಿಪ್​ಗಳೆಂಬ ಮೂರು ವಿಧಗಳಿವೆ. ಸಿಂಗಲ್ ಲೈನ್ ವಿಪ್​ನಲ್ಲಿ ಮತದಾನದ ದಿನಾಂಕ ಮೊದಲಾದ ವಿವರವನ್ನು ನೋಟೀಸ್ ಮೂಲಕ ನೀಡಲಾಗುತ್ತದೆ. ಇದರಲ್ಲಿ ಜನಪ್ರತಿನಿಧಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವೇನೂ ಇರುವುದಿಲ್ಲ. ಡಬಲ್ ಲೈನ್ ವಿಪ್​ನಲ್ಲಿ ಮತದಾನ ಮಾಡಲು ಪಕ್ಷವು ಸ್ವಲ್ಪಮಟ್ಟಿಗೆ ಕಡ್ಡಾಯ ಮಾಡಿರುತ್ತದೆ. ಸರಿಯಾದ ಕಾರಣ ಕೊಟ್ಟು ಮತದಾನದಿಂದ ದೂರು ಉಳಿಯುವ ಸ್ವಾತಂತ್ರ್ಯವನ್ನ ಕೊಟ್ಟಿರಲಾಗುತ್ತದೆ. ಇನ್ನು, ಮೂರನೇಯದಾದ ಥ್ರೀಲೈನ್ ವಿಪ್​ನಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿರಲಾಗುತ್ತದೆ. ಥ್ರೀಲೈನ್ ವಿಪ್ ಪಡೆದವರು ಮತದಾನ ಮಾಡಲಿಲ್ಲವೆಂದರೆ ಪಕ್ಷದಿಂದಲೇ ಅಮಾನತಾಗುವ ಸಾಧ್ಯತೆ ಇರುತ್ತದೆ. ಪಕ್ಷಗಳು ಕೊಡುವ ವಿಪ್ ಸಾಮಾನ್ಯವಾಗಿ ಥ್ರೀ ಲೈನ್ ವಿಪ್ ಆಗಿರುತ್ತದೆ.

Leave a Reply

Your email address will not be published. Required fields are marked *