ಕುಮಾರಸ್ವಾಮಿ ಸರ್ಕಾರ ದೇವರು ಕೊಟ್ಟ ಸರ್ಕಾರ, ದೇವ್ರ ಆಶಿರ್ವಾದ ಇರೋವರೆಗೂ ಏನೂ ಆಗಲ್ಲ!: ರೇವಣ್ಣ
ನ್ಯೂಸ್ ಕನ್ನಡ ವರದಿ: ಇದು ದೇವರು ಕೊಟ್ಟ ಸರ್ಕಾರ. ದೇವರ ಆಶೀರ್ವಾದ ಇರುವವರೆಗೆ ಸಿಎಂಗೆ ಏನೂ ಮಾಡೋಕೆ ಆಗಲ್ಲ ಎಂದು ಸಚಿವ ಎಚ್ ಡಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ದೇವರು ಕೊಟ್ಟ ಸರ್ಕಾರ. ಹೀಗಾಗಿ ದೇವರ ಆಶೀರ್ವಾದ ಇರುವವರೆಗೆ ಸಿಎಂಗೆ ಏನೂ ಮಾಡೋಕೆ ಆಗಲ್ಲ. ದೇವರು ಎಲ್ಲಿಯವರೆಗೆ ಅಧಿಕಾರ ಕೊಡುತ್ತಾನೆ ಅಲ್ಲಿಯವರೆಗೆ ನಾವು ಇರುತ್ತೇವೆ. ಸರ್ಕಾರ ಬಿದ್ದರೆ ಸಿಎಂ ಅವರಿಗೆ ನಷ್ಟ ಇಲ್ಲ. ಜನರಿಗೆ ನಷ್ಟ ಆಗೋದು. ಅಧಿಕಾರದಲ್ಲಿ ಇರುವವರೆಗೆ ಜನರ ಸಿಎಂ ಜನರ ಸೇವೆ ಮಾಡುತ್ತಾರೆ ಎಂದು ಹೇಳಿದರು.
ಇಂದು ಕೂಡ ಸರ್ಕಾರಕ್ಕೆ ಏನೂ ಆಗಲ್ಲ ನೋಡುತ್ತಾ ಇರಿ. ದೇವರ ಆಶೀರ್ವಾದ ಸಿಎಂ ಅವರ ಮೇಲೆ ಇದೆ. ಮಾಜಿ ಪ್ರಧಾನಿ ದೇವೇಗೌಡರ ಹಾಗೂ ಸಿಎಂ ಅವರ ಬಗ್ಗೆ ಮಾತಾನಾಡಲಿಲ್ಲ ಎಂದರೆ ಕೆಲವರಿಗೆ ಊಟ ಸೇರಲ್ಲ. ಹೀಗಾಗಿ ಅವರ ಬಗ್ಗೆ ಮಾತನಾಡುತ್ತಾರೆ. ನನ್ನ ಬಗ್ಗೆ ಆರೋಪ ಮಾಡುತ್ತಾರೆ. 5 ರೂ. ಹಣವನ್ನು ಕೂಡ ನಾನು ಯಾವ ಇಲಾಖೆಗೂ ಬಿಡುಗಡೆ ಮಾಡಿಲ್ಲ. ಇದೆಲ್ಲಾ ಸುಳ್ಳು ಸುದ್ದಿ. ನನ್ನ ಮೇಲೆ ಮಾಡುತ್ತಿರುವ ಆರೋಪವನ್ನು ಯಾರಾದರೂ ಸಾಬೀತು ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಚಾಮುಂಡೇಶ್ವರಿ ಬೆಟ್ಟಕ್ಕೆ ಬಂದ ರೇವಣ್ಣ ಅವರು ಸರ್ಕಾರದ ಭದ್ರತೆ ನಡುವೆ ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಕಳೆದ ಶುಕ್ರವಾರವೂ ಕೂಡ ಚಾಮುಂಡಿ ಬೆಟ್ಟಕ್ಕೆ ರೇವಣ್ಣ ಅವರು ಬಂದಿದ್ದರು.