ಮಹಾತ್ಮ ಗಾಂಧಿಯನ್ನೇ ಕೊಂದ ದೇಶ, ನನ್ನನ್ನು ಬಿಡುತ್ತಾರಾ?: ಸ್ಪೀಕರ್ ಹೀಗೆ ಹೇಳಿದ್ದೇಕೆ ಗೊತ್ತೇ?
ನ್ಯೂಸ್ ಕನ್ನಡ ವರದಿ: ನಿನ್ನೆ ಶಾಸಕರು ಕ್ರಮಬದ್ಧವಾಗಿ ರಾಜೀನಾಮೆ ಕೊಟ್ಟಿದ್ದಾರೆ. ಇಂದು ಮೂವರು ಶಾಸಕರಿಗೆ ವೈಯಕ್ತಿಕ ಭೇಟಿಗೆ ಸಮಯ ಕೊಟ್ಟಿದ್ದೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್, ಅತೃಪ್ತರ ಅರ್ಜಿ ಸಂಬಂಧ ಸುಪ್ರಿಂ ಕೋರ್ಟ್ ತೀರ್ಮಾನ ಮಾಡಲಿ. ಸುಪ್ರೀಂ ತೀರ್ಪು ನನಗೆ ಅನ್ವಯ ಆಗತ್ತೋ ಇಲ್ವೋ ನೋಡೋಣ. ಆದೇಶ ಮಾಡಿದರೆ ಅವರಲ್ಲೇ ಮಾಹಿತಿ ಕೇಳೋಣ ಎಂದು ಹೇಳಿದರು.
ಇದು ಗಾಂಧಿಯನ್ನೇ ಕೊಂದ ದೇಶ. ಇನ್ನು ರಮೇಶ್ಕುಮಾರ್ನನ್ನು ಬಿಡುತ್ತಾರಾ. ಆದರೆ, ನಿಜವಾಗಿಯೂ ಗಾಂಧಿ ಸತ್ತಿದ್ದಾರಾ, ಅವರ ಮೌಲ್ಯಗಳು ಸತ್ತಿವೆಯಾ. ಗಾಂಧಿ ದೈಹಿಕವಾಗಿ ಇಲ್ಲದಿರಬಹುದು. ಆದರೆ, ಅವರ ಮೌಲ್ಯ, ಆದರ್ಶಗಳು ಯಾವಾಗಲೂ ಇರುತ್ತದೆ. ನಾವು ಆ ದಾರಿಯಲ್ಲೇ ನಡೆದುಕೊಂಡು ಬಂದವರು. ಬಹಳ ಹಿಂದಿನಿಂದಲೂ ನನ್ನ ತೇಜೋವಧೆ ಮಾಡುತ್ತಿದ್ದಾರೆ, ಮಾಡಲಿ. ಅವರಿಗೆಲ್ಲ ಒಳ್ಳೇದಾಗಲಿ ಎಂದು ಅಸಮಾಧಾನ ಹೊರಹಾಕಿದರು. ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಆ ಬಗ್ಗೆ ತೀರ್ಮಾನಕ್ಕೆ ಯೋಚನೆ ಮಾಡ್ತಾ ಇದೀನಿ. ಸಂವಿಧಾನಕ್ಕೆ ಅಪಚಾರ, ಅತ್ಯಾಚಾರ ಮಾಡಲ್ಲ. ಯಾರ ಖುಷಿಗೆ, ಅಸಂತೋಷಕ್ಕೆ ನಾನು ಕುಣಿಯಲ್ಲ. ನಾನು ನೃತ್ಯಗಾರ್ತಿ ಅಲ್ಲ. ಯಾರ ಒತ್ತಡಕ್ಕೂ ಮಣಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದರು.