ರಮೇಶ್ ಜಾರಕಿಹೊಳಿ ವಿರುದ್ಧ ಉಪಚುನಾವಣೆಗೆ ಕಾಂಗ್ರೆಸ್ ನಾಯಕ ರೆಡಿ! ಯಾರು ಗೊತ್ತೇ?
ನ್ಯೂಸ್ ಕನ್ನಡ ವರದಿ : ಅತೃಪ್ತಿಯ ಬೆಂಕಿ ಮೊದಲು ಹೊತ್ತಿಕೊಂಡಿದ್ದು ಬೆಳಗಾವಿಯಲ್ಲಿ, ಈಗ ಅದು ಇಲ್ಲಿಯವರೆಗೆ ಬಂದು ತಲುಪಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮೊನ್ನೆಯಷ್ಟೇ ಹೇಳಿದ್ದರು. ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಕುರಿತು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಗೋಕಾಕ್ ವಿಧಾನಸಭಾ ಕ್ಷೇತ್ರ ತೆರವಾದರೆ, ಕಾಂಗ್ರೆಸ್ನಿಂದ ಲಖನ್ ಜಾರಕಿಹೊಳಿ ಕಣಕ್ಕೆ ಇಳಿಯಲಿದ್ದಾರೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಗೋಕಾಕ್ನಿಂದ ನಾನು ಸ್ಪರ್ಧೆ ಮಾಡುವುದಿಲ್ಲ. ಈಗಾಗಲೇ ಲಖನ್ ಜಾರಕಿಹೊಳಿ ಅಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದು, ಅವರನ್ನೇ ಕಾಂಗ್ರೆಸ್ನಿಂದ ಕಣಕ್ಕೆ ಇಳಿಸಲಾಗುವುದು. ಅಣ್ಣ- ತಮ್ಮಂದಿರು ಎನ್ನುವುದಕ್ಕಿಂತ ನಮಗೆ ಪಕ್ಷವೇ ಮುಖ್ಯ. ಉಪಚುನಾವಣೆಯಲ್ಲಿ ಸಹೋದರರ ನಡುವೆ ಸ್ಪರ್ಧೆ ನಡೆಯುವುದು ಖಚಿತ. ಗೋಕಾಕ್ದಲ್ಲಿ ನಮ್ಮ ಪಕ್ಷದಿಂದ ನಾವು ಹೋರಾಟ ಮಾಡುತ್ತೇವೆ. ಪಕ್ಷವನ್ನು ಸಂಘಟಿಸುತ್ತೇವೆ. ರಮೇಶ್ ಪತ್ನಿ ಇಲ್ಲವೇ ಅಳಿಯ ಅಂಬಿರಾಯ ನಿಂತರೂ ಲಖನ್ ಸ್ಪರ್ಧಿಸುವುದು ಖಚಿತ. ರಮೇಶ್ ಅವರು ತಮ್ಮ ಮೂವರು ಜನ ಅಳಿಯಂದಿರಿಗಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಿಜವಾಗಿದೆ ಎಂದು ಹೇಳಿದರು.