ಎರಡು ಬಣವಾದ ಅತೃಪ್ತರ ತಂಡ! ಒಂದು ತಂಡ ಕಾಂಗ್ರೆಸ್ ಗೆ ವಾಪಸ್! ಇಲ್ಲಿದೆ ಡೀಟೇಲ್ಸ್
ನ್ಯೂಸ್ ಕನ್ನಡ ವರದಿ: ಶನಿವಾರ ಸಂಜೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ಅತೃಪ್ತ ಶಾಸಕರಾದ ಎಂಬಿಟಿ ನಾಗರಾಜ್ ಹಾಗೂ ಡಾ. ಸುಧಾಕರ್ ರಾಜೀನಾಮೆ ಹಿಂಪಡೆದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುವುದು ಬಹುತೇಕ ಖಚಿತವಾಗಿದೆ. ರಾಜ್ಯ ರಾಜಕಾರಣದಲ್ಲಿ ಇಂತಹ ಒಂದು ಹೊಸ ಬೆಳವಣಿಗೆ ನಡೆಯುತ್ತಿದ್ದಂತೆ ಮುಂಬೈನ ಖಾಸಗಿ ಹೋಟೆಲ್ನಲ್ಲಿ ಆಶ್ರಯಪಡೆದಿರುವ ಅತೃಪ್ತ ಶಾಸಕರು ಗಲಿಬಿಲಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಕುಮಾರಸ್ವಾಮಿ ಹಾಗೂ ಸೂಪರ್ ಸಿಎಂ ಹೆಚ್.ಡಿ. ರೇವಣ್ಣ ತನ್ನ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ವಸತಿ ಸಚಿವ ಎಂಟಿಬಿ ನಾಗರಾಜ್ ಸಹ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಿಗೆ ಶಾಸಕ ಸುಧಾಕರ್ ಸಹ ರಾಜೀನಾಮೆ ನೀಡಿ ಹೊರನಡೆದಿದ್ದರು. ಈ ಬೆಳವಣಿಗೆ ಮೈತ್ರಿ ನಾಯಕರಿಗೆ ಶಾಕ್ ಮೇಲೆ ಶಾಕ್ ನೀಡಿದರೆ, ಮುಂಬೈನಲ್ಲಿದ್ದ ಅತೃಪ್ತರಲ್ಲಿ ಒಗ್ಗಟ್ಟು ಮೂಡಿಸಿತ್ತು.
ಆದರೆ, ಡಿಸಿಎಂ ಜಿ. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಶನಿವಾರ ಎಂಟಿಬಿ ನಾಗರಾಜ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಎಂಟಿಬಿ ತಾನು ರಾಜೀನಾಮೆ ವಾಪಸ್ ಪಡೆದು ಮತ್ತೆ ಕಾಂಗ್ರೆಸ್ ಬೆಂಬಲಿಸುತ್ತೇನೆ. ಅಲ್ಲದೆ, ಸುಧಾಕರ್ ಅವರೂ ರಾಜೀನಾಮೆಯನ್ನು ಹಿಂಪಡೆಯುವಂತೆ ಮನವೊಲಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಕಳೆದ ಒಂದು ವಾರದಿಂದ ಕಾಂಗ್ರೆಸ್ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ. ಶಿವಕುಮಾರ್ ಸೇರಿದಂತೆ ಯಾವ ನಾಯಕರು ಮನವೊಲಿಸಿದರು ತಮ್ಮ ಒಗ್ಗಟ್ಟು ಬಿಟ್ಟುಕೊಡದ ಅತೃಪ್ತರು ಶನಿವಾರ ಒಂದೇ ದಿನದ ಬೆಳವಣೆಯಲ್ಲಿ ತಮ್ಮ ಒಗ್ಗಟ್ಟನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣವೂ ಇಲ್ಲದೆ ಏನಿಲ್ಲ.
ಶುಕ್ರವಾರ ನಡೆದ ಮೊದಲ ದಿನದ ಅಧಿವೇಶನದಲ್ಲಿ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ ತಮಗೆ ವಿಶ್ವಾಸಮತ ಯಾಚಿಸಲು ಸಮಯಾವಕಾಶ ನೀಡಿ ಎಂದು ಕೇಳಿಕೊಂಡಿದ್ದರು. ಅಸಲಿಗೆ ಮೈತ್ರಿ ಸರ್ಕಾರದ 17 ಜನ ಶಾಸಕರು ರಾಜೀನಾಮೆ ನೀಡಿದ ಹೊರತಾಗಿಯೂ ಮೈತ್ರಿ ಪಕ್ಷಗಳ ಹಾಗೂ ಬಿಜೆಪಿ ನಡುವಿನ ಬಹುಮತದ ಸಂಖ್ಯೆಯ ಅಂತರ ಕೇವಲ 4 ರಿಂದ 5 ಮಾತ್ರ.
ಈಗಾಗಲೇ ರೋಷನ್ ಬೇಗ್ ತಣ್ಣಗಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ರಾಮಲಿಂಗಾರೆಡ್ಡಿ, ಎಂಟಿಬಿ ನಾಗರಾಜ್ ಹಾಗೂ ಸುಧಾಕರ್ ತಮ್ಮ ರಾಜೀನಾಮೆಯನ್ನು ವಾಪಸ್ ತೆಗೆದುಕೊಂಡರೆ ತಮ್ಮ ಗತಿ ಏನು? ಎಂಬುದು ಅತೃಪ್ತರ ಚಿಂತೆಗೆ ಕಾರಣವಾಗಿದೆ. ಇದೇ ಕಾರಣಕ್ಕೆ ತಮ್ಮ ಮುಂದಿನ ನಡೆಯ ಕುರಿತು ಚರ್ಚೆ ಮಾಡಲು ಅತೃಪ್ತರು ನಿನ್ನೆ ಮಧ್ಯರಾತ್ರಿ ಸಭೆ ನಡೆಸಿದ್ದಾರೆ.
ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಭೈರತಿ ಬಸವರಾಜ್, ಮುನಿರತ್ನ ಹಾಗೂ ಎಸ್.ಟಿ. ಸೋಮಶೇಖರ್ ಇದೀಗ ಅತೃಪ್ತ ಶಾಸಕರಲ್ಲೇ ಮತ್ತೊಂದು ಬಣವಾಗಿ ಮಾರ್ಪಟ್ಟಿದ್ದಾರೆ. ಇದೀಗ ಮನಸು ಬದಲಿಸಿರುವ ಈ ಮೂರು ಶಾಸಕರು ಮತ್ತೆ ಕಾಂಗ್ರೆಸ್ ಕಡೆಗೆ ವಾಲುವ ತೀರ್ಮಾನ ತೆಗೆದುಕೊಂಡಿದ್ದಾರೆ. ಅಲ್ಲದೆ ಇವರ ಮನವೊಲಿಸುವ ಕೆಲಸವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವಹಿಸಿಕೊಡಲಾಗಿದೆ ಎಂದು ಹೇಳಲಾಗುತ್ತದೆ.
ಒಟ್ಟಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಯನ್ನು ಕೂಲಂಕುಷವಾಗಿ ಗಮನಿಸಿದರೆ ಸಿಎಂ ಕುಮಾರಸ್ವಾಮಿ ವಿಧಾನಮಂಡಲ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸುವುದು ಬಹುತೇಖ ಖಚಿತ ಎನ್ನಲಾಗುತ್ತಿದೆ.