ಬಿಜೆಪಿಯವರೇ ನಿಮಗೆ ಧಮ್ ಇದ್ರೆ ಆಪರೇಷನ್ ಕಮಲ ನೀವೇ ಮಾಡಿದ್ದೆಂದು ಒಪ್ಪಿಕೊಳ್ಳಿ!: ಡಿಕೆಶಿ ಕಿಡಿ !
ನ್ಯೂಸ್ ಕನ್ನಡ ವರದಿ : ಇತ್ತ ನಾಳೆ ಅಧಿವೇನ ಕಲಾಪದ ಎರಡನೇಯ ದಿನ. ಹೀಗಾಗಿ ನಾಳೆಯೇ ವಿಶ್ವಾಸಮತ ಯಾಚಿಸಲು ಸಮಯ ಕೊಡುವಂತೆ ನಾವು ಒಟ್ಟಾಗಿ ಸ್ಪೀಕರ್ ಅವರನ್ನು ಒತ್ತಾಯಿಸುತ್ತೇವೆ. ಹೀಗಾಗಿ ಕುಮಾರಸ್ವಾಮಿ ಸೋಮವಾರವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಇಲ್ಲದಿದ್ದರೆ ವಿಶ್ವಾಸಮತ ಯಾಚಿಸಲಿ ಎಂದು ಬಿ.ಎಸ್. ಯಡಿಯೂರಪ್ಪ ಸವಾಲುಹಾಕಿದ್ದಾರೆ.
ಅತ್ತ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ದೋಸ್ತಿ ನಾಯಕರಿಗೆ ಕೈಕೊಟ್ಟು ಮುಂಬೈಗೆ ಹಾರಿದ್ದಾರೆ. ಅತೃಪ್ತ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್, ಸುಧಾಕರ್ ಮುಂಬೈಗೆ ಹೋಗುವಾಗ ಬಿಜೆಪಿ ನಾಯಕ ಆರ್. ಅಶೋಕ್ ಉಪಸ್ಥಿತರಿದ್ದ ಹಿನ್ನೆಲೆ ಬಿಜೆಪಿ ವಿರುದ್ದ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
‘ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ, ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳಬೇಕು. ನಾವು ಮಾಡುತ್ತಿದ್ದೇವೆ, ಈ ಆಪರೇಷನ್ ನಮ್ಮದೇ, ನಮಗೆ ಸಿಎಂ ಕುರ್ಚಿ ಬೇಕು ಅಂತ ಬಿಜೆಪಿ ನಾಯಕರು ಒಪ್ಪಿಕೊಳ್ಳಬೇಕು. ಪಂಚಾಯಿತಿಗಳಲ್ಲಿ ನಡೆದ ಹಾಗೆ ನಾವು ಮಾಡುತ್ತಿದ್ದೇವೆ ಎಂದು ಒಪ್ಪಿಕೊಳ್ಳಲಿ,’ ಎಂದು ಆಗ್ರಹಿಸಿದರು. ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸ್ನೇಹಿತರು ಎಲ್ಲರಿಗೂ ಕಿವಿ ಮೇಲೆ ಹೂ ಇಡುತ್ತಿದ್ದರು. ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಅವರ ಪಕ್ಷದ ಆಂತರಿಕ ವಿಚಾರ. ನಾವು ಯಾವುದಕ್ಕೂ ತಲೆ ಹಾಕಲ್ಲ ಎಂದು ಹೇಳುತ್ತಿದ್ದರು. ಆದರೆ ಹೋಟೆಲ್, ಬಾಂಬೆ, ದೆಹಲಿ, ಏರ್ ಪೋರ್ಟ್, ಫ್ಲೈಟ್ ವ್ಯವಸ್ಥೆ ಸೇರಿದಂತೆ ಎಲ್ಲಾ ಆಪರೇಷನ್ ಬಿಜೆಪಿಯವರದ್ದೇ’, ಎಂದು ಕಿಡಿಕಾರಿದರು.