ಐಎಂಎ ಬಹುಕೋಟಿ ಹಗರಣದಲ್ಲಿ ಇಂದು ಶಾಸಕ ರೋಷನ್​ ಬೇಗ್ ಭವಿಷ್ಯ ನಿರ್ಧಾರ? ಓದಿ ಮುಂದೆ..

ನ್ಯೂಸ್ ಕನ್ನಡ ವರದಿ : ಐಎಂಎ ಬಹುಕೋಟಿ ಹಗರಣದಲ್ಲಿ ತಲೆಮರೆಸಿಕೊಂಡಿದ್ದ ಮೊಹಮದ್ ಮನ್ಸೂರ್​ ಖಾನ್​ ಆಡಿಯೋ ಟೇಪ್ ಒಂದನ್ನು ಪೊಲೀಸ್ ಕಮಿಷನರ್​ಗೆ ಕಳುಹಿಸಿದ್ದರು. ಅದರಲ್ಲಿ ಕಾಂಗ್ರೆಸ್​ ಶಾಸಕ ರೋಷನ್​ ಬೇಗ್ ವಿರುದ್ಧವೂ ಆರೋಪ ಮಾಡಿದ್ದರು. ರೋಷನ್​ ಬೇಗ್ 400 ಕೋಟಿ ರೂ. ಪಡೆದಿದ್ದಾರೆ. ಅದನ್ನು ಕೇಳಿದರೆ ರೌಡಿಗಳನ್ನು ಕಳುಹಿಸುತ್ತಿದ್ದಾರೆ. ನನ್ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮನ್ಸೂರ್ ಆರೋಪ ಮಾಡಿದ್ದರು. ಇದರಿಂದಾಗಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿತ್ತು. ಹೀಗಾಗಿ, ಇಂದು ರೋಷನ್ ಬೇಗ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದ್ದು, ರೋಷನ್ ಬೇಗ್ ಭವಿಷ್ಯ ಇಂದು ನಿರ್ಧಾರವಾಗಲಿದೆ.

ರೋಷನ್​ ಬೇಗ್​ಗೆ ಮನ್ಸೂರ್​ ಖಾನ್​ ಹಣ ನೀಡಿರುವ ಪ್ರಸ್ತಾಪವಿರುವ ಆಡಿಯೋದಲ್ಲಿ ಸಾಮ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಸಿಐಡಿ ಆವರಣದಲ್ಲಿರುವ ಎಸ್​ಐಟಿ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ಈ ಮೊದಲೇ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರೂ ರೋಷನ್ ಬೇಗ್ ಹಾಜರಾಗಿರಲಿಲ್ಲ. ಇದೇ ಪ್ರಕರಣದಲ್ಲಿ ಬೆಂಗಳೂರು ನಗರ ಡಿಸಿ ವಿಜಯ್ ಶಂಕರ್, ಎಸಿ ಎಲ್ ಸಿ ನಾಗರಾಜ್ ಅವರನ್ನು ಕೂಡ ಎಸ್​ಐಟಿ ವಿಚಾರಣೆ ನಡೆಸಿತ್ತು. ಇಂದು ಡಿಸಿಪಿ ಗಿರೀಶ್ ನೇತೃತ್ವದಲ್ಲಿ ರೋಷನ್ ಬೇಗ್ ವಿಚಾರಣೆ ನಡೆಯಲಿದೆ. ಈಗಾಗಲೇ ರೋಷನ್​ ಬೇಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡಿರುವ ಇವರು ಕಾಂಗ್ರೆಸ್ ನಾಯಕರ ವಿರುದ್ಧವೇ ಹೇಳಿಕೆ ನೀಡಿದ್ದರಿಂದ ಕಾಂಗ್ರೆಸ್​ ಪಕ್ಷದಿಂದ ಅಮಾನತು ಮಾಡಲಾಗಿತ್ತು.

Leave a Reply

Your email address will not be published. Required fields are marked *