ಜಿ.ಟಿ.ದೇವೇಗೌಡರು ಮತ್ತೆ ಬಿಜೆಪಿಗೆ ಪಕ್ಷಾಂತರ! ಏನಿದು ಸುದ್ದಿ ?
ನ್ಯೂಸ್ ಕನ್ನಡ ವರದಿ : ಲೋಕಸಭೆ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆ ಎಂದು ಹೇಳಿ ಮೈತ್ರಿ ಪಕ್ಷ ಕಾಂಗ್ರೆಸ್ ಅಸಮಾಧಾನಕ್ಕೆ ಕಾರಣವಾಗಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಇನ್ನು ಮೈತ್ರಿ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿರುವ ವೇಳೆ ಜಿ.ಟಿ.ದೇವೇಗೌಡ ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿ ಎಲ್ಲೆಡೆ ಹರಡಿದೆ.
ಜೆಡಿಎಸ್ ತೊರೆದು ಬಿಜೆಪಿ ಗೆ ಬನ್ನಿ ಎಂದು ಆಹ್ವಾನಿಸಿ ಸಾಮಾಜಿಕ ಜಾಲತಾಣ ದಲ್ಲಿ ಅಭಿಮಾನಿಗಳು ಪೋಸ್ಟ್ ಹಾಕಿದ್ದಾರೆ. ಕೆಲ ಬಿಜೆಪಿ ಕಾರ್ಯಕರ್ತರೂ ಜಿಟಿಡಿ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಮೈತ್ರಿ ಸರ್ಕಾರ ನಿಮಗೆ ಮೋಸ ಮಾಡಿದೆ. ಒಬ್ಬ ಮುಖ್ಯ ಮಂತ್ರಿ ಯನ್ನ ಸೋಲಿಸಿದ ನಿಮ್ಮನ್ನು ಸರಿಯಾದ ಕ್ರಮದಲ್ಲಿ ನಡೆಸಿಕೊಂಡಿಲ್ಲ. ಹುಣಸೂರಿನಲ್ಲಿಯೂ ನಿಮ್ಮ ಪುತ್ರನಿಗೆ ಅನ್ಯಾಯವಾಗಿದೆ. ಇದನ್ನೆಲ್ಲಾ ಮನಗಂಡು ಮರಳಿ ಬಿಜೆಪಿ ಆಗಮಿಸಬೇಕೆಂದು ಪೋಸ್ಟ್ ಹಾಕಲಾಗಿದೆ. ಇನ್ನು ಮುಂಚೆ ಜೆಡಿಎಸ್ನಲ್ಲಿದ್ದ ಜಿಟಿಡಿ ನಂತರ ಬಿಜೆಪಿಗೆ ಹೋಗಿ ಪುನಃ ಜೆಡಿಎಸ್ಗೆ ಬಂದು ಸಚಿವರಾಗಿದ್ದಾರೆ. ಮೈತ್ರಿ ಸರ್ಕಾರ ನಾಜೂಕು ಸ್ಥಿತಿಯಲ್ಲಿರುವಾಗ ವದಂತಿ ಎಲ್ಲೆಡೆ ಹರಡಿದ್ದು ಭಾರೀ ಸುದ್ದಿಗೆ ಗ್ರಾಸವಾಗಿದೆ.