ಇಂದಿನ ಸುಪ್ರೀಂಕೋರ್ಟ್ ತೀರ್ಪಿನ ನಂತರ ಅತೃಪ್ತ ಶಾಸಕರಿಂದ ಯುಟರ್ನ್? ಡೀಟೇಲ್ಸ್ ಓದಿ..

ನ್ಯೂಸ್ ಕನ್ನಡ ವರದಿ: ಕರ್ನಾಟಕ ಮಾತ್ರವಲ್ಲ, ದೇಶದ ರಾಜಕೀಯಾಸಕ್ತರ ಕಣ್ಣು ಈಗ ಸುಪ್ರೀಂಕೋರ್ಟ್‌ನತ್ತ ನೆಟ್ಟಿದೆ. 15 ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಗಳು ಮತ್ತು ಸ್ಪೀಕರ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮತ್ತು ತೀರ್ಪನ್ನು ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಮಂಗಳವಾರ ಯಾರ ಪಾಲಿಗೆ ‘ಮಂಗಳ’ವಾಗಲಿದೆ ಎಂಬುದು ಗೊತ್ತಾಗಲಿದೆ.

ಸುಪ್ರೀಂಕೋರ್ಟ್ ನೀಡುವ ತೀರ್ಪು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇದೆ. ಈ ತೀರ್ಪು ಹಿಂದೆಂದೂ ನೀಡಿರದ ವಿಶಿಷ್ಟ ತೀರ್ಪು ಎಂದಾದರೆ, ದೇಶದ ಇತಿಹಾಸ ಪುಟದಲ್ಲಿಯೂ ದಾಖಲಾಗಲಿದೆ. ಆದರೆ, ಸುಪ್ರೀಂಕೋರ್ಟ್ ಈ ರೀತಿಯ ಚರ್ಚಾಸ್ಪದ ತೀರ್ಪು ಪ್ರಕಟಿಸುವ ಸಂಭವ ಕಡಿಮೆ ಎಂದೂ ಹೇಳಲಾಗುತ್ತಿದೆ.

ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ಸೂಚನೆ ನೀಡುವಂತೆ ಹತ್ತು ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ಸ್ಪೀಕರ್ ರಮೇಶ್ ಕುಮಾರ್ ಅವರೂ ತಮಗೆ ಸಂವಿಧಾನಬದ್ಧವಾಗಿ ಇರುವ ಅಧಿಕಾರವನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡುವ ಮೂಲಕ ಈ ರೀತಿಯ ಪ್ರಕರಣಗಳಲ್ಲಿ ತರಾತುರಿಯ ನಿರ್ಧಾರ ಸಾಧ್ಯವಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ರಾಜೀನಾಮೆ ಸಲ್ಲಿರುವ ಶಾಸಕರ ಅನರ್ಹತೆಯ ಕುರಿತಾದ ವಿಚಾರ ಕೂಡ ಪ್ರಸ್ತಾಪವಾಗಿತ್ತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ನಡೆಸಲಿದೆ.

15 ಶಾಸಕರು, ಸ್ಪೀಕರ್ ಅರ್ಜಿಗಳ ವಿಚಾರಣೆ : ಸುಪ್ರೀಂಕೋರ್ಟ್‌ನ ಸೂಚನೆಯಂತೆ ಸ್ಪೀಕರ್ ಅವರ ಮುಂದೆ ಶಾಸಕರು ಹಾಜರಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದ ಚಟುವಟಿಕೆಗಳ ಕುರಿತಾದ ವರದಿಯನ್ನೂ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿತ್ತು. ಈ ಎರಡೂ ಕಡೆಯ ವಾದ ವಿವಾದಗಳನ್ನು ಆಲಿಸಿದ್ದ ಸುಪ್ರೀಂಕೋರ್ಟ್ ತೀರ್ಪನ್ನು ಮಂಗಳವಾರಕ್ಕೆ ಮುಂದೂಡಿತ್ತು. ಈ ನಡುವೆ ಮತ್ತೆ ಐವರು ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ತಮ್ಮ ರಾಜೀನಾಮೆಯನ್ನು ಅಂಗೀಕಾರ ಮಾಡಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ. ಬೇಗನೆ ರಾಜೀನಾಮೆ ಅಂಗೀಕಾರ ಮಾಡುವಂತೆ ಸೂಚಿಸಿ ಎಂದು ಐವರು ಅತೃಪ್ತ ಶಾಸಕರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ. ಈ ಅರ್ಜಿಗಳು ಕೂಡ ಮಂಗಳವಾರ ವಿಚಾರಣೆಗೆ ಬರಲಿವೆ.

ವಿಶ್ವಾಸಮತ ಯಾಚನೆಗೆ ಪರಿಣಾಮವಿಲ್ಲ?
ಸುಪ್ರೀಂಕೋರ್ಟ್ ನೀಡುವ ತೀರ್ಪಿನಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯ ಅಡಗಿದೆಯೇ? ಹಾಗೆ ಹೇಳುವುದು ಕಷ್ಟ. ಏಕೆಂದರೆ ಸುಪ್ರೀಂಕೋರ್ಟ್ ನೀಡುವ ತೀರ್ಪು ಶಾಸಕರು ಮತ್ತು ಸ್ಪೀಕರ್ ಅರ್ಜಿಗಳ ಮೇಲಷ್ಟೇ ಇರಲಿದೆ. ಈ ತೀರ್ಪು, ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿಶ್ವಾಸಮತ ಯಾಚನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ.

ಸ್ಪೀಕರ್ ವಿವೇಚನೆಗೆ ಬಿಡಬಹುದು!
ಹತ್ತು ಮಂದಿ ಶಾಸಕರ ಅರ್ಜಿಗಳ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸುಪ್ರೀಂಕೋರ್ಟ್, ಈ ಪ್ರಕರಣದಲ್ಲಿ ಸಾಂವಿಧಾನಿಕ ಒಳಹುಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿತ್ತು. ಹಾಗೆಯೇ ಮಂಗಳವಾರ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿತ್ತು. ಮಂಗಳವಾರ ಕೂಡ ಸುಪ್ರೀಂಕೋರ್ಟ್ ಗುರುವಾರದ ವಿಶ್ವಾಸಮತ ಯಾಚನೆ ಸಂದರ್ಭದವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಹೇಳಬಹುದು. ಅಥವಾ ಆದಷ್ಟು ಬೇಗನೆ ಈ ಗೊಂದಲಕ್ಕೆ ಪರಿಹಾರ ಕೊಡಿ ಎಂದು ಸ್ಪೀಕರ್ ಅವರ ವಿವೇಚನೆಗೇ ಬಿಟ್ಟುಬಿಡುವ ಸಾಧ್ಯತೆಯೂ ಇದೆ.

ತೀರ್ಪಿನ ಆಧಾರದಲ್ಲಿ ಶಾಸಕರ ನಡೆ?
ಮಂಗಳವಾರದ ತೀರ್ಪಿನ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರ ಮುಂದಿನ ನಡೆ ಬದಲಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇಂದಿನ ತೀರ್ಪು ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ದೊಡ್ಡ ಟಾನಿಕ್ ಆಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳಿದ್ದು, ಅತೃಪ್ತ ಶಾಸಕರು ಕಲಾಪದಲ್ಲಿ ಹಾಜರಾಗಿ ಸ್ಪೀಕರ್ ಅಥವಾ ಪಕ್ಷದ ತೀರ್ಮಾನಕ್ಕೆ ಬದ್ಧರಾಗಬೇಕು ಎಂದರೆ ಸರ್ಕಾರಕ್ಕೆ ಮರುಜೀವ ದೊರೆತರೂ ಅಚ್ಚರಿಯಿಲ್ಲ. ಹಾಗೆಯೇ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬಳಿಕ ವಿಶ್ವಾಸಮತ ಯಾಚನೆಗೆ ಎರಡು ದಿನ ಬಾಕಿ ಇರುತ್ತದೆ. ಆ ಅವಧಿಯಲ್ಲಿ ಏನೆಲ್ಲ ಘಟನೆಗಳು ನಡೆಯಬಹುದು ಎಂಬ ಕುತೂಹಲವೂ ಮೂಡಿದೆ.

Leave a Reply

Your email address will not be published. Required fields are marked *