ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಅಧಿಕಾರ ಅನುಭವಿಸಿ ಎಸ್.ಎಂ ಕೃಷ್ಣ ಪಕ್ಷ ಬಿಡಬಾರದಿತ್ತು!: ಶ್ರೀನಿವಾಸ್ ಪ್ರಸಾದ್
ನ್ಯೂಸ್ ಕನ್ನಡ ವರದಿ : ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿರುವ ಮಾಜಿ ಸಚಿವ ಎಸ್.ಎಂ.ಕೃಷ್ಣ ರವರ ಬಗ್ಗೆ ಮಾತನಾಡಿದ ಸಂಸದ ವಿ.ಶ್ರೀನಿವಾಸ ಪ್ರಸಾದ್, ವೈಯಕ್ತಿಕವಾಗಿ ಹೇಳಬೇಕೆಂದರೆ ಕೃಷ್ಣ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಬಾರದಿತ್ತು. ಪಕ್ಷ ಬಿಟ್ಟಬಳಿಕ ರಾಜಕೀಯ ನಿವೃತ್ತಿಯನ್ನು ಪಡೆಯಬೇಕಿತ್ತು. ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಅಧಿಕಾರವನ್ನೂ ಅನುಭವಿಸಿದ್ದಾರೆ. ಆದರೆ, ಕಾಂಗ್ರೆಸ್ ತೊರೆಯುವ ನಿರ್ಧಾರ ಕೈಗೊಂಡ ಬಳಿಕ ಅವರ ರಾಜಕೀಯ ಜೀವನ ಅಂತ್ಯಗೊಂಡಿದೆ ಎಂದರು. ಇದೇ ವೇಳೆ ಮೈತ್ರಿ ಸರ್ಕಾರ ಪತನ ಕುರಿತು ಮಾತನಾಡಿದರು.
ಇಂದಿನ ಎಲ್ಲ ಬೆಳವಣಿಗೆಗಳಿಗೆ ದೋಸ್ತಿ ಮುಖಂಡರೇ ಕಾರಣರಾಗಿದ್ದಾರೆ. ಒಂದು ವರ್ಷದಿಂದಲೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ನಿಷ್ಕ್ರಿಯವಾಗಿದ್ದಾರು. ದೇವೇಗೌಡ ಅವರಿಗೆ ಸಿದ್ದರಾಮಯ್ಯ ದೊಡ್ಡ ದುಷ್ಮನ್. ಸಿದ್ದರಾಮಯ್ಯನವರಿಗೆ ದೇವೇಗೌಡರು ದುಷ್ಮನ್. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಲತಾಯಿ ಧೋರಣೆ ಹಾಗೂ ಸಚಿವ ರೇವಣ್ಣನವರ ಸರ್ವಾಧಿಕಾರಿ ಧೋರಣೆ ಈ ಎಲ್ಲ ಅವ್ಯವಸ್ಥೆಗಳಿಗೆ ಕಾರಣವಾಗಿದೆ. 13 ಶಾಸಕರು ಪಕ್ಷ ತೊರೆದಿರುವುದು ಕುಮಾರಸ್ವಾಮಿಯವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಬಿಜೆಪಿ 104 ಸ್ಥಾನಗಳನ್ನು ಪಡೆದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಸಮನ್ವಯ ಸಮಿತಿಯೊಳಗಿನ ಕಿತ್ತಾಟಗಳು, ವಿಶ್ವನಾಥ್ ಅವರಿಗೆ ಯಾವುದೇ ಸ್ಥಾನ ನೀಡದೆ ಕಡೆಗಣಿಸಿದ್ದು ಸರ್ಕಾರದ ಅವನತಿಯತ್ತ ಸಾಗುವುದಕ್ಕೆ ಕಾರಣವಾದವು ಎಂದರು.