ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಬಗ್ಗೆ ನೀವು ತಪ್ಪದೇ ಓದಲೇಬೇಕಾದ ಸುದ್ದಿ!

ನ್ಯೂಸ್ ಕನ್ನಡ ವರದಿ: ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಆಡಳಿತಕ್ಕೆ ತೊಂದರೆಯಾದಾಗ ಅದನ್ನು ಸೂಕ್ಷ್ಮವಾಗಿ ರೆಬೆಲ್ ಶೈಲಿಯಲ್ಲೆ ಬಗೆಹರಿಸುತ್ತಿದ್ದ ಏಕೈಕ ವ್ಯಕ್ತಿ ಟ್ರಬಲ್ ಶೂಟರ್ ಡಿಕೆಶಿ.

ಮೊನ್ನೆ ಮೊನ್ನೆಯಷ್ಟೆ ಸೋಫಿಟೆಲ್‍ನಿಂದ ರೆನೆಸಾನ್ಸ್ ಹೋಟೆಲ್‍ಗೆ ಶಿಫ್ಟ್ ಆಗಿದ್ದ ಅತೃಪ್ತ ಶಾಸಕರನ್ನು ಮಾತಾಡಿಸಿ ಕರೆದುಕೊಂಡೇ ಬರುತ್ತೇನೆಂದು ಹೊರಟ ಡಿ.ಕೆ.ಶಿವಕುಮಾರ್ ಸಾಧಿಸಿದ್ದೇನು? ಒಬ್ಬ ಶಾಸಕರನ್ನಾದರೂ ಕರೆದುಕೊಂಡು ಬರುವುದಿರಲಿ ಮಾತಾಡಿಸಲೂ ಅವರಿಗೆ ಸಾಧ್ಯವಾಗಲಿಲ್ಲ. ಆದರೆ, ಅವರಿಗೆ ಏನು ಬೇಕೋ ಅದನ್ನು ಅವರು ಪಡೆದುಕೊಂಡಾಯಿತು. ಬೆಳಿಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಇಂಗ್ಲಿಷ್ ಚಾನೆಲ್‍ಗಳೂ ಒಳಗೊಂಡಂತೆ ಮಾಧ್ಯಮದ ಕೇಂದ್ರಬಿಂದು ಡಿ.ಕೆ.ಶಿ ಅವರೇ ಆಗಿದ್ದರು.

ಮಹಾರಾಷ್ಟ್ರದಲ್ಲಿ ಮತ್ತು ಇಂಗ್ಲಿಷಿನಲ್ಲಿ ವ್ಯವಹರಿಸುವ ಹಲವಾರು ಪ್ರಭಾವೀ ಟ್ವಿಟ್ಟಿಗರು ಕಾಂಗ್ರೆಸ್ ಪಕ್ಷದ ಮೇಲೆ ಯಾವ ಪರಿ ಬಿದ್ದರೆಂದರೆ, ಮುಂಬೈನ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ದೇವ್ರಾ ಅವರಿಗೆ ಟ್ವಿಟ್ಟರ್ ನಲ್ಲೇ ಉತ್ತರಿಸಿ ಓಡಿ ಹೋಗಿ ಡಿಕೆಶಿ ಪಕ್ಕ ಕೂರಬೇಕಾಯಿತು. ಅಂತಿಮವಾಗಿ ಡಿಕೆಶಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಹೋಗುವಾಗ ಜೊತೆಯಲ್ಲಿ ಮಿಲಿಂದ್ ದೇವ್ರಾ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ನಸೀಮ್ ಖಾನ್ ಸಹಾ ಇದ್ದರು.

ಖ್ಯಾತ ಪತ್ರಕರ್ತೆ ಸ್ವಾತಿ ಚತುರ್ವೇದಿ ಒಂದೇ ಸಮನೆ ಟ್ವೀಟ್ ಮಾಡುತ್ತಾ ಕಾಂಗ್ರೆಸ್ಸಿಗರನ್ನು ಕಾಡಿದರು. ರಾಹುಲ್‍ಗಾಂಧಿಗೂ ಟ್ಯಾಗ್ ಮಾಡಿ, ‘ಅಲ್ಲಿ ಒಬ್ಬಂಟಿಯಾಗಿ ಹೋರಾಡುತ್ತಿರುವ ಡಿ.ಕೆ.ಶಿವಕುಮಾರ್‍ರನ್ನು ನೋಡಿ ಕಲಿತುಕೊಳ್ಳಿ’ ಎಂದರು. ರಾಹುಲ್‍ಗಾಂಧಿಯ ಸ್ಥಾನದಲ್ಲಿ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರಾಗುವ ಹೆಸರುಗಳಲ್ಲಿ ಮಿಲಿಂದ್ ದೇವ್ರಾ ಹೆಸರೂ ಓಡುತ್ತಿತ್ತು. ಹಾಗಾಗಿ ರಾಷ್ಟ್ರೀಯ ಅಧ್ಯಕ್ಷರಾಗಬೇಕಾದವರು ಡಿ.ಕೆ.ಶಿವಕುಮಾರ್ ಥರದವರು; ಮಿಲಿಂದ್ ದೇವ್ರಾ ಅಲ್ಲ ಎಂದೆಲ್ಲಾ ಹೇಳಲಾಯಿತು.

ಇದಕ್ಕೆ ಮುಂಚೆ ಸ್ಪೀಕರ್‍ಗೆ 12 ಜನ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿ ಬಂದಾಗಲೂ ವಿಧಾನಸೌಧಕ್ಕೆ ಓಡಿದ್ದ ಡಿಕೆಶಿ ಶಾಸಕ ಮುನಿರತ್ನರ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದರು. ಮರುದಿನ ಮುಂಬೈನ ಅದೇ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿಕೊಂಡು ವಿಮಾನ ಹತ್ತುವ ಮುಂಚೆಯೇ ‘ಮುಂಬೈಗೆ ಹೋಗಿ ಅವರನ್ನು ಕರೆತರುತ್ತೇನೆ’ ಎಂದು ಘೋಷಿಸಿದರು. ಹೋಟೆಲ್‍ನಲ್ಲಿದ್ದ ಶಾಸಕರನ್ನು ಡಿಕೆಶಿ ಭೇಟಿಯಾಗದಂತೆ ತಡೆಯಬೇಕೆಂದರೆ ಅವರಿಂದಲೇ ದೂರು ಪಡೆದುಕೊಳ್ಳಬೇಕು. ಬಿಜೆಪಿ ಅದನ್ನೂ ಮಾಡಿತು. ಮಧ್ಯರಾತ್ರಿ ಅಲ್ಲಿದ್ದ 10 ಶಾಸಕರಿಂದ ದೂರು ಬರೆಸಿಕೊಂಡು, ಮರುದಿನ ಅಲ್ಲಿನ ಡಿಸಿಪಿ ‘ಈ ಪತ್ರ ಇಲ್ಲದೇ ಇದ್ದರೆ ನಾವು ನಿಮ್ಮನ್ನು ತಡೆಯುತ್ತಿರಲಿಲ್ಲ’ ಎಂದು ಹೇಳಲು ಬೇಕಾದ ವ್ಯವಸ್ಥೆ ಮಾಡಿಕೊಂಡರು.

ಅದೂ ಸಹಾ ಡಿಕೆಶಿಯ ಸಾಮಥ್ರ್ಯದ ಬಗೆಗಿನ ಇಮೇಜ್‍ ಅನ್ನು ಹೆಚ್ಚಿಸಿತೇ ಹೊರತು ಕಡಿಮೆ ಮಾಡಲಿಲ್ಲ. ಹೋಟೆಲ್ ಮುಂದೆ ಪೊಲೀಸರು ತಡೆದಾಗ ಶಿವಕುಮಾರ್ ವಾಪಸ್ ಹೋಗಲಿಲ್ಲ. ನಾನಿವತ್ತು ಇಲ್ಲೇ ಇದ್ದು ಕರೆದುಕೊಂಡೇ ಹೋಗುತ್ತೇನೆ ಎಂದರು. ಇಂಗ್ಲಿಷ್ ಮೀಡಿಯಾಗಳಿಗೆ ಮಾತನಾಡಿದರು. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಡಿಕೆಶಿ ವಹಿಸಿದ್ದ ಪಾತ್ರದಿಂದ ‘ಟ್ರಬಲ್‍ಶೂಟರ್’ ಪಟ್ಟ ಗಿಟ್ಟಿಸಿಕೊಂಡಿದ್ದ ಅವರು ಮಧ್ಯೆ ಡಲ್ ಆಗಿದ್ದರು. ಈಗ ಮತ್ತೆ ಟ್ರಬಲ್‍ಶೂಟರ್ ಅಲ್ಲದಿದ್ದರೂ ಫೈಟರ್ ಎಂಬ ಇಮೇಜ್‍ಅನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರೀಯ ಮಟ್ಟದಲ್ಲೂ ಸ್ಥಾಪನೆ ಮಾಡಿಕೊಂಡರು.

2002ರಲ್ಲಿ ವಿಲಾಸರಾವ್ ದೇಶಮುಖ್ ವಿಶ್ವಾಸಮತ ಯಾಚನೆ ಮಾಡುವ ಸಂದರ್ಭದಲ್ಲಿ, 2017ರಲ್ಲಿ ಗುಜರಾತ್‍ನ ಎಂಎಲ್‍ಎಗಳು ಅಹ್ಮದ್ ಪಟೇಲ್‍ರಿಗೇ ರಾಜ್ಯಸಭಾ ಚುನಾವಣೆಯಲ್ಲಿ ಓಟು ಹಾಕುವಂತೆ ಮಾಡಲು ಶಾಸಕರನ್ನು ಕರ್ನಾಟಕಕ್ಕೇ ಕಳಿಸಿ ಡಿಕೆಶಿ ಸುಪರ್ದಿಗೆ ವಹಿಸಲಾಗಿತ್ತು. ಎಲ್ಲವನ್ನೂ ತಲೆ ಮೇಲೆ ಹೊತ್ತುಕೊಂಡು ಮಾಡಿದ ಅವರು ಇಂದಲ್ಲಾ ನಾಳೆ ರಾಜ್ಯದ ಮುಖ್ಯಮಂತ್ರಿ ಆಗುವ ಆಸೆ ಇಟ್ಟುಕೊಂಡೇ ಇದ್ದಾರೆ.

ಆದರೆ, ತನ್ನ ಹಿಂದೆ ಬೆರಳಣಿಕೆಯ ಶಾಸಕರನ್ನೂ ಹೊಂದಿಲ್ಲದಿರುವುದೇ ಅವರ ಸಮಸ್ಯೆ. ಅದರ ಜೊತೆಗೆ ‘ಬ್ಯಾಡ್‍ಬಾಯ್’ ಇಮೇಜ್ ಇನ್ನೂ ಇದ್ದು, ಕುಮಾರಸ್ವಾಮಿಗಿರುವ ಜನಾನುರಾಗಿ ಎಂದೋ ಅಥವಾ ಸಿದ್ದರಾಮಯ್ಯರಿಗಿರುವ ಮಾಸ್ ಲೀಡರ್ ಎಂಬ ಇಮೇಜೋ ಇಲ್ಲದಿರುವ ಕೊರತೆ ಇದೆ. ಕನಿಷ್ಠ ಒಕ್ಕಲಿಗರ ನಾಯಕ ಎಂಬ ಪಟ್ಟವಾದರೂ ಇರಲಿ ಎಂಬ ಕಾರಣಕ್ಕೆ ‘ಯಾವ ಕಾರಣಕ್ಕೂ ಕುಮಾರಸ್ವಾಮಿಯವರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡುವುದಿಲ್ಲ’ ಎಂಬ ಮಾತನ್ನು ಪದೇ ಪದೇ ಹೇಳಿದ್ದಾರೆ.

ಇವೆಲ್ಲವೂ ಇಂದಲ್ಲಾ ನಾಳೆ ಡಿಕೆ ಶಿವಕುಮಾರ್ ರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಏರಿಸುತ್ತಾ ಎಂಬುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *