ಸಿಎಂ ಕುಮಾರಸ್ವಾಮಿಯಿಂದ ರಿವರ್ಸ್ ಆಪರೇಷನ್? ಬಸವರಾಜ್ ನೀಡಿದ ಸ್ಫೋಟಕ ಮಾಹಿತಿಯೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಬಾಗಲಕೋಟೆ (ಜುಲೈ.17); ಶತಾಯಗತಾಯ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಮುಂದಾಗಿರುವ ಸಿಎಂ ಹೆಚ್.ಡಿ. ಕುಮಾರಸ್ವಾಮಿ ರಿವರ್ಸ್ ಆಪರೇಷನ್​ಗೆ ಮುಂದಾಗಿದ್ದಾರ? ಬಿಜೆಪಿ ಶಾಸಕರಿಗೆ ಗಾಳ ಹಾಕಿದ್ದಾರ? ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರ ಈ ಹೇಳಿಕೆ.

ರಿವರ್ಸ್ ಆಪರೇಷನ್ ಕುರಿತು ಇಂದು ಬಾಗಲಕೋಟೆಯಲ್ಲಿ ಮಾತನಾಡಿರುವ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, “ವಿಶ್ವಾಸ ಮತ ಯಾಚನೆ ವೇಳೆ ಏನಾದರೂ ಆಗಬಹುದು. ಬಿಜೆಪಿಯವರಲ್ಲೂ ಆಪರೇಷನ್ ಮಾಡಿದ್ದೇವೆ ಎಂದು ಈಗಾಗಲೇ ಸಿಎಂ ಕುಮಾರಸ್ವಾಮಿ ನಮಗೆ ಹೇಳಿದ್ದಾರೆ. ಹೀಗಾಗಿ ವಿಶ್ವಾಸಮತ ಯಾಚನೆ ವೇಳೆ ಬಿಜೆಪಿಯ ಕೆಲ ಶಾಸಕರು ನಮ್ಮ ಪರವಾಗಿ ಕೈ ಎತ್ತಬಹುದು. ಬಿಜೆಪಿಯವರೆ ನಮಗೆ ಬೆಂಬಲ ಸೂಚಿಸಬಹುದು” ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸುಪ್ರೀಂ ತೀರ್ಪಿನ ಕುರಿತು ಮಾತನಾಡಿದ ಅವರು, “ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ನಮಗೆ ಯಾವುದೇ ಧಕ್ಕೆ ಇಲ್ಲ. ‘ವಿಪ್’ ಜಾರಿ ಮಾಡುವುದು ಆಯಾ ಪಕ್ಷಗಳ ಸಂವಿಧಾನಾತ್ಮಕ ಹಕ್ಕು. ಕಲಾಪಕ್ಕೆ ಭಾಗಿಯಾಗುವ ವಿಚಾರ ಶಾಸಕರಿಗೆ ಬಿಟ್ಟಿದ್ದು. ಶಾಸಕರ ರಾಜಿನಾಮೆ ಅಂಗೀಕಾರ, ತಿರಸ್ಕಾರ ಸ್ಪೀಕರ್ ಗೆ ಬಿಟ್ಟಿದ್ದು. ಈ ಬಗ್ಗೆ ಸ್ಪೀಕರ್ ಇಂದು ಅಥವಾ ನಾಳೆ ನಿಧಾ೯ರ ಕೈಗೊಳ್ಳಬಹುದು. ಆದರೆ, ಬಹುಮತ ಸಾಬೀತುಪಡಿಸುವ ಸಮಯದಲ್ಲಿ ಏನಾಗಲಿದೆ? ಎಂಬುದನ್ನು ಮಾತ್ರ ಕಾದಿದ್ದು ನೋಡಿ” ಎಂದು ಮಾರ್ಮಿಕವಾಗಿ ನುಡಿಯುವ ಮೂಲಕ ರಿವರ್ಸ್ ಆಪರೇಷನ್ ಸಾಧ್ಯಾಸಾಧ್ಯತೆಯನ್ನು ಮುಂದಿಟ್ಟಿದ್ದಾರೆ.

ರೆಬೆಲ್ ಶಾಸಕರ ಪರವಾಗಿ ಬುಧವಾರ ಪ್ರಕಟವಾದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ಗುರುವಾರ ಕುಮಾರಸ್ವಾಮಿ ಸರ್ಕಾರದ ವಿಶ್ವಾಸ ಮತ ಯಾಚನೆ ಇಡೀ ದೇಶದ ಗಮನ ಸೆಳೆದಿದೆ. ಆದರೆ, ಆಪರೇಷನ್ ಮೈತ್ರಿಯ ಕುರಿತು ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದ್ದು ಇದೀಗ ರಾಜ್ಯ ರಾಜಕಾರಣದಲ್ಲಿ ನಾಳೆಯ ವಿಶ್ವಾಸಮತ ಯಾಚನೆ ಪ್ರಸಂಗ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *