ಬಿಜೆಪಿಗೆ ಜಗ್ಗಲಿಲ್ಲ, ರಾಜ್ಯಪಾಲರಿಗೂ ಬಗ್ಗಲಿಲ್ಲ! ಸ್ಪೀಕರ್ ನಡೆಗೆ ಕಮಲ ಕಂಗಾಲು!

ನ್ಯೂಸ್ ಕನ್ನಡ ವರದಿ: ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವಿಶ್ವಾಸಮತಯಾಚನೆಗೆ ದಿನ ನಿಗದಿಯಾದ ಕಾರಣ ಆಪರೇಷನ್ ಕಮಲದ ಮೂಲಕ ತಮಗೆ ಬೇಕಾದ ಸಂಖ್ಯಾಬಲದೊಂದಿಗೆ ಸದನದಲ್ಲಿ ಬಹುಮತ ಸಾಬೀತು ಮಾಡುವ ಸಂಪೂರ್ಣ ವಿಶ್ವಾಸದೊಂದಿಗೆ ವಿಧಾನಸಭೆ ಪ್ರವೇಶಿಸಿದ್ದ ಭಾರತೀಯ ಜನತಾ ಪಕ್ಷದ ಶಾಸಕರಿಗೆ ಹಾಗೂ ಅಧ್ಯಕ್ಷ ಯಡಿಯುರಪ್ಪ ಅವರಿಗೆ ಸ್ಪೀಕರ್ ನಡೆಯಿಂದ ಸಂಪೂರ್ಣ ನಿರಾಸೆ ಯಾಗಿದೆ.

ಮಧ್ಯಾಹ್ನದ ಕಲಾಪದವರೆಗೂ ಸ್ಪೀಕರ್ ಅವರೊಂದಿಗೆ ಶಾಂತರೀತಿಯಲ್ಲಿ ವರ್ತಿಸಿದ ಬಿಜೆಪಿ ನಾಯಕರು ಮಧ್ಯಾಹ್ನದ ಊಟದ ನಂತರ ಕಲಾಪ ಪ್ರಾರಂಭವಾದಾಗ ಆಕ್ರಮಣಕಾರಿ ಶೈಲಿಯಲ್ಲಿ ಕಾಣಿಸಿಕೊಂಡರು, ಈ ಮಧ್ಯೆ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಅವರ ಮೂಲಕವೂ ಒತ್ತಡ ಹೇರಲು ಯತ್ನಿಸಿದರು.

ಮಧ್ಯಾಹ್ನದ ಕಲಾಪ ಆರಂಭವಾದಾಗ ಸ್ಪೀಕರ್ ರಮೇಶ್ ಕುಮಾರ್ ನನಗೆ ರಾಜ್ಯಪಾಲರ ಪತ್ರ ಬಂದಿದೆ ಅದರಲ್ಲಿ ವಿಶ್ವಾಸಮತಯಾಚನೆ ಪ್ರಕ್ರಿಯೆ ಇಂದು ಸಂಜೆಯೊಳಗೆ ಪೂರ್ತಿಗೊಳಿಸಿ ಎಂದು ಬರೆದಿದೆ ಎಂದರು. ಆದರೆ ಅದು ನಿರ್ದೇಶನ ಅಲ್ಲ, ರಾಜ್ಯಪಾಲರು ಸ್ಪೀಕರ್ ಗೆ ಆದೇಶ ನೀಡುವ ಹಾಗಿಲ್ಲ, ನಾನು ಸಂವಿಧಾನದ ಎಲ್ಲಾ ನಿಯಮಗಳನ್ನು ಪಾಲಿಸಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಖಡಕ್ ಉತ್ತರ ನೀಡಿ ಬಿಜೆಪಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದರು.

ಸಂಜೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು ತೀವ್ರ ಪ್ರತಿಭಟನೆ ನಡೆಸಿದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಿದರು. ಇದರೊಂದಿಗೆ ಇಂದೇ ವಿಶ್ವಾಸಮತ ಗೆದ್ದು ಸರ್ಕಾರ ರಚಿಸುವ ಕನಸು ಕಾಣುತ್ತ ಇದ್ದ ಯಡಿಯುರಪ್ಪ ಮತ್ತು ತಂಡಕ್ಕೆ ಸ್ಪೀಕರ್ ತಡೆಗೋಡೆಯಾಗಿ ಪರಿಣಮಿಸಿದರು.

Leave a Reply

Your email address will not be published. Required fields are marked *