ರಾಮಲಿಂಗ ರೆಡ್ಡಿ – ದೇವೇಗೌಡ ಗೌಪ್ಯ ಭೇಟಿ! ಸರ್ಕಾರ ಉಳಿಸಲು ನಡೆದಿದೆ ಕಸರತ್ತು?
ನ್ಯೂಸ್ ಕನ್ನಡ ವರದಿ: ಅತೃಪ್ತ ಶಾಸಕರೊಂದಿಗೆ ಸೇರಿ ರಾಜೀನಾಮೆ ನೀಡಿ, ಬಳಿಕ ನಾಯಕರ ಮನವೊಲಿಕೆಗೆ ಮಣಿದು ರಾಜೀನಾಮೆ ವಾಪಸ್ ಪಡೆದುಕೊಂಡಿರುವ ಬಿಟಿಎಂ ಲೇಔಟ್ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಅವರು ಶನಿವಾರ ಬೆಳಿಗ್ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.
ರಾಮಲಿಂಗಾ ರೆಡ್ಡಿ ಅವರ ಆಗಮನದ ಮಾಹಿತಿ ಪಡೆದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ದೇವೇಗೌಡರ ನಿವಾಸಕ್ಕೆ ತೆರಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಇದು ಸೌಜನ್ಯದ ಭೇಟಿ ಅಷ್ಟೇ. ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಕರೆತರುವ ಪ್ರಯತ್ನದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದರು. ಮಾತುಕತೆಯ ವಿವರಗಳನ್ನು ಅವರು ಬಹಿರಂಗಪಡಿಸಲಿಲ್ಲ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಈ ಮಾತುಕತೆ ನಡೆಯಿತು.
ಆದರೂ ಒಂದು ಗಂಟೆಗೂ ಹೆಚ್ಚು ನಡೆದ ಮಾತುಕತೆಯಲ್ಲಿ ಅತೃಪ್ತ ಶಾಸಕರ ಮನವೊಲಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ, ಹಲವು ಸಲಹೆ ಸೂಚನೆ ದೇವೇಗೌಡರು ರಾಮಲಿಂಗ ರೆಡ್ಡಿಯವರಿಗೆ ನೀಡಿದ್ದಾರೆ ಎಂದು ಎನ್ನಲಾಗಿದ್ದು,ತೀವ್ರ ಕುತೂಹಲ ಮೂಡಿಸಿದೆ.