ಅಡ್ವಾಣಿಗೆ ಆದ ಗತಿ ತನಗೂ ಆಗುತ್ತೆ ಎಂಬ ಭಯ ಯಡಿಯುರಪ್ಪಗೆ!: ಬಂಡೆಪ್ಪ ವಾಗ್ದಾಳಿ
ನ್ಯೂಸ್ ಕನ್ನಡ ವರದಿ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಗೆ ವಯಸ್ಸಾಗಿದ್ದು, ಎಲ್ಲಿ ತಮ್ಮನ್ನು ಎಲ್.ಕೆ. ಅಡ್ವಾಣಿ ಅವರಂತೆ ಅಧಿಕಾರದಿಂದ ದೂರ ಇಡುತ್ತಾರೋ ಎಂಬ ಭಯದಿಂದ ಅಧಿಕಾರ ಹಿಡಿದು ಮುಖ್ಯಮಂತ್ರಿ ಆಗಲು ಅತುರ ಪಡುತ್ತಿದ್ದಾರೆ ಎಂದು ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದ್ದಾರೆ.
ಯಡಿಯೂರಪ್ಪ ಅಧಿಕಾರ ಹಿಡಿದು ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತುಕೊಳ್ಳಲು ಆತುರಪಡುತ್ತಿದ್ದಾರೆ. ಎಲ್ಲಿ ತನ್ನನ್ನು ಅಡ್ವಾಣಿ ತರ ಮೂಲೆಗುಂಪು ಮಾಡಿ ಕೂರಿಸಿಬಿಡುತ್ತಾರೋ ಎಂಬ ಆತಂಕ ಅವರಿಗೆ ಕಾಡುತ್ತಿದೆ ಎಂದರು. ಬಿಎಸ್ವೈ ಅಧಿಕಾರ ಹಿಡಿಯಲು ವಾಮಮಾರ್ಗಗಳ ಮೂಲಕ ಅಡ್ಡ ದಾರಿ ಹಿಡಿದಿದ್ದಾರೆ. ಮೈತ್ರಿ ಸರ್ಕಾರ ದೇವರು ಹಾಗೂ ಜನರ ಆಶೀರ್ವಾದದಿಂದ ರಚನೆಯಾಗಿದೆ. ಹೀಗಾಗಿ ಕೊನೆ ಕ್ಷಣದವರೆಗೂ ನಾವು ಕಾಯುತ್ತೇವೆ. ಅಂತಿಮ ಕ್ಷಣದಲ್ಲಿ ಏನಾದ್ರೂ ಚಮತ್ಕಾರ ನಡೆದು ಅತೃಪ್ತ ಶಾಸಕರು ಬರಬಹುದು. ಸರ್ಕಾರ ಉಳಿಯಬಹುದು ಅವರು ಮನವರಿಕೆ ಮಾಡಿಕೊಳ್ಳುವ ವಿಶ್ವಾಸ ಇದೆ ಎಂದರು.
ಬಿಜೆಪಿಯವರ ಬಳಿ ಪೂರ್ಣ ಪ್ರಮಾಣದ ಶಾಸಕರ ಸಂಖ್ಯೆ ಇಲ್ಲ. ಪೂರ್ಣ ಪ್ರಮಾಣ ಸಂಖ್ಯೆ ಬರಬೇಕಾದರೆ 113 ಶಾಸಕರ ಬೆಂಬಲ ಇರಬೇಕು. ಆದರೆ ಬಿಜೆಪಿಯವರ ಬಳಿಯೂ 113 ಸಂಖ್ಯೆ ಇಲ್ಲ, ಇನ್ನೂ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ. ಯಾವುದೋ ಒಂದು ಚಮತ್ಕಾರದಿಂದ ಈ ಸರ್ಕಾರ ಉಳಿಯಬಹುದು ಎಂದರು.