ಇಲ್ಲಿ ರಾಷ್ಟ್ರಪತಿ ಆಡಳಿತ ಬಂದ್ರೂ ಕುದುರೆ ವ್ಯಾಪಾರ ನಿಲ್ಲಲ್ಲ ಎಂದ ಬಿಜೆಪಿ ನಾಯಕ!

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಂದರೂ ಕುದುರೆ ವ್ಯಾಪಾರ ನಿಲ್ಲಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಬಂದರೆ ಮಾತ್ರ ಎಲ್ಲದಕ್ಕೂ ಅಂತ್ಯ ಬೀಳುತ್ತದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡರು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆ ಆಗಲೇ ಬೇಕು. ಬರ, ರೈತರ ಸಮಸ್ಯೆ ಪರಿಹಾರಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ಸಿಎಂ ವಿಶ್ವಾಸ ಮತ ಮಾಡದಿದ್ದರೆ ಬಿಜೆಪಿ ಮುಂದೆ ಹಲವು ಮಾರ್ಗಗಳಿವೆ. ಸಂವಿಧಾನಾತ್ಮಕವಾಗಿ ಹೋರಾಟ ಮಾಡುತ್ತೇವೆ. ನಾಳೆ ರಾಜ್ಯಪಾಲರು, ರಾಷ್ಟ್ರಪತಿ, ಸುಪ್ರೀಂಕೋರ್ಟ್ ಕಡೆ ಗಮನ ಕೊಡುತ್ತೇವೆ ಎಂದರು.

ಇಲ್ಲಿಯವರೆಗೆ ಲೋಕಸಭಾ ಚುನಾವಣೆ ಎಂದು ಅಭಿವೃದ್ಧಿ ನಿಂತಿತ್ತು. ಇನ್ನೂ 3 ತಿಂಗಳು ಅಭಿವೃದ್ಧಿ ನಿಂತುಬಿಟ್ಟರೆ ಕರ್ನಾಟಕವನ್ನು ಮತ್ತೆ ಮೇಲಕ್ಕೆತ್ತಲು ಸಾಧ್ಯವಿಲ್ಲ. ಮಧ್ಯಂತರ ಚುನಾವಣೆ ಮಾಡಿದರೆ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬರುತ್ತದೆ ಎಂದು ಹೇಳುವ ಮೂಲಕ ಮಧ್ಯಂತರ ಚುನಾವಣೆಗೆ ಡಿವಿಎಸ್ ವಿರೋಧ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲ. ಅವರ ಅಂಕಿ 100ಕ್ಕಿಂತಲೂ ಕೆಳಕ್ಕೆ ಕುಸಿದಿದೆ. ಪಕ್ಷಾಂತರ ಮಾಡುವವರನ್ನು ಬಿಟ್ಟು ನಮ್ಮಲ್ಲಿ 107 ಮಂದಿ ಇದ್ದು, ಬಹುಮತವಿದೆ. ಇದು ಇಡೀ ಜಗತ್ತಿಗೆ ಗೊತ್ತಿರುವಾಗ ಈ ರೀತಿಯಲ್ಲಿ ಪ್ರಜಾತಂತ್ರಕ್ಕೆ ಅಗೌರವ ಕೊಡುವುದು ನಾಚಿಕೇಡಿನ ಸಂಗತಿಯಾಗಿದೆ ಎಂದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಇವರು ಅಧಿಕಾರಕ್ಕೋಸ್ಕರ ಏನು ಮಾಡುತ್ತಾರೆ ಎಂಬುದು ಇಡೀ ಜಗಜ್ಜಾಹೀರಾಗಿದೆ. ನನಗೆ ವಿಶ್ವಾಸವಿದೆ. ಸುಪ್ರೀಂ ಕೋರ್ಟ್ ಕೂಡ ಯಾವುದೇ ಅರ್ಜಿ ಹಾಕಿದರೂ ತಿರಸ್ಕರಿಸುತ್ತದೆ ಎಂಬ ವಿಶ್ವಾಸವಿದೆ. ಭಾರತೀಯ ಜನತಾ ಪಾರ್ಟಿ ನ್ಯಾಯಯುತವಾಗಿ ಹಾಗೂ ಸಂವಿಧಾನ ಬದ್ಧವಾಗಿ ನಡೆದುಕೊಂಡಿದೆ ಎಂದು ತಿಳಿಸಿದರು.

ಕಾಂಗ್ರೆಸ್- ಜೆಡಿಎಸ್ ನಲ್ಲಿ ತುಂಬಾ ಜನ ಅತೃಪ್ತರಾಗಿದ್ದಾರೆ. ಅಯ್ಯೋ ರೀತಿಯೂ ನಮ್ಮ ನಾಯಕರು ನಡೆದುಕೊಳ್ಳುತ್ತಾರಲ್ವ ಎಂಬ ಭಾವನೆ ಅವರಲ್ಲಿ ಈಗಾಗಲೇ ಬಂದಿದೆ. ನಾವು ಶಾಂತಯುತವಾಗಿ, ಗೌರವಯುತವಾಗಿ ಸದನದ ಕಲಾಪಕ್ಕೆ ಗೌರವ ಕೊಟ್ಟು, ಸ್ಪೀಕರ್, ರಾಜ್ಯಪಾಲರು ಹಾಗೂ ಸುಪ್ರೀಂ ಕೋರ್ಟಿನ ಆದೇಶಕ್ಕೆ ಗೌರವ ಕೊಟ್ಟು ನಮ್ಮ ಕೆಲಸವನ್ನು ಮಾಡಿದ್ದೇವೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *