ನಾಳೆ ಸಂಜೆ ತನಕ ಕಾಯ್ತಾರಂತೆ ರಾಜ್ಯ ಬಿಜೆಪಿಯವರು! ನಂತರವೇನು ಮಾಡ್ತಾರೆ? ಓದಿ..
ನ್ಯೂಸ್ ಕನ್ನಡ ವರದಿ : ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಭವಿಷ್ಯ ಸೋಮವಾರ ನಿರ್ಣಾಯಕ ಹಂತ ತಲುಪುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದ್ದು, ತನ್ನದೇ ಆದ ರಣತಂತ್ರ ರೂಪಿಸುವಲ್ಲಿ ಕಾರ್ಯೋನ್ಮುಖವಾಗಿದೆ. ಯಲಹಂಕ ಸಮೀಪದ ರೆಸಾರ್ಟ್ವೊಂದರಲ್ಲಿ ತಮ್ಮ ಪಕ್ಷದ ಶಾಸಕರೊಂದಿಗೆ ಬೀಡುಬಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸದನದಲ್ಲಿ ಅನುಸರಿಸಬೇಕಾದ ನಡೆಗಳ ಬಗ್ಗೆ ಶನಿವಾರ ಚರ್ಚೆ ನಡೆಸಿದರು.
ರಾಜ್ಯಪಾಲರು ನೀಡಿರುವ ಎರಡು ಗಡುವುಗಳನ್ನು ಮೀರಿರುವ ಸರಕಾರಕ್ಕೆ ಕೊನೆಯದಾಗಿ ಮೂರನೇ ಗಡುವನ್ನು ನೀಡಿ ಸೋಮವಾರವೇ ವಿಶ್ವಾಸಮತ ಸಾಬೀತುಪಡಿಸಲು ಸೂಚಿಸಲಾಗಿದೆ. ಈಗಾಗಲೇ ಎರಡು ಗಡುವುಗಳನ್ನು ಮೀರಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಮ್ಮಿಶ್ರ ಸರಕಾರ ತಮ್ಮ ಸೂಚನೆ ಪಾಲಿಸುತ್ತಿಲ್ಲ ಎಂದು ಮಧ್ಯಂತರ ವರದಿ ಸಲ್ಲಿಸಿದ್ದಾರೆ. ನಾಳೆಯೂ ಸೂಚನೆ ಪಾಲಿಸದೆ ಹೋದರೆ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದ ಬಗ್ಗೆ ಅಂತಿಮ ವರದಿ ಸಲ್ಲಿಸಿ ದೋಸ್ತಿ ಸರಕಾರವನ್ನು ವಜಾಗೊಳಿಸಲು ಬಿಜೆಪಿ ಹೈಕಮಾಂಡ್ ಸಿದ್ಧತೆ ಮಾಡಿಕೊಂಡಿದೆ. ಕಳೆದ ಎರಡು ದಿನಗಳ ಕಾಲ ಸದನದಲ್ಲಿ ಅನುಸರಿಸಿದ ತಂತ್ರವನ್ನೇ ಸೋಮವಾರವೂ ಅನುಸರಿಸಲು ಬಿಜೆಪಿ ನಿರ್ಧರಿಸಿದೆ. ದೋಸ್ತಿ ಸರಕಾರವನ್ನು ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದಲ್ಲಿ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ಹೊಸ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.