ಆಪರೇಷನ್ ಕಮಲಕ್ಕೆ ಖೆಡ್ಡ ತೊಡಲು ಮುಂದಾದ ಘಟಾನುಗಟಿ ಮೈತ್ರಿ ನಾಯಕರು!
ನ್ಯೂಸ್ ಕನ್ನಡ ವರದಿ: ವಿಶ್ವಾಸಮತ ಯಾಚನೆಗೆ ನಾಳೆ ಮೈತ್ರಿ ಸರ್ಕಾರ ಸ್ವಯಂ ಕಾಲಮಿತಿ ವಿಧಿಸಿಕೊಂಡಿದ್ದು ಅದರ ಅನುಸಾರ ಶತಾಯಗತಾಯ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ಉಭಯ ಪಕ್ಷಗಳ ನಾಯಕರು ನಿನ್ನೆಯಿಂದ ಅಖಾಡಕ್ಕಿಳಿದು ಬಿರುಸಿನ ಕಾರ್ಯತಂತ್ರ ನಡೆಸುತ್ತಿದ್ದಾರೆ.
ಒಂದೆಡೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಖಾಡಕ್ಕಿಳಿದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅತೃಪ್ತರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರು ತಮ್ಮ ಕಾವೇರಿ ನಿವಾಸದಿಂದ ಖಾಸಗಿ ಕಾರಿನಲ್ಲಿ ಸಚಿವ ಜಮೀರ್ ಅಹಮ್ಮದ್, ವಿಧಾನಪರಿಷತ್ ಮಾಜಿ ಸದಸ್ಯ ನಜೀರ್ ಅಹಮ್ಮದ್ ಜೊತೆ ಅಜ್ಞಾತ ಸ್ಥಳಕ್ಕೆ ತೆರಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮ್ಮದ್ ಖಾನ್, ನಾವು ಖಾಸಗಿ ಕೆಲಸದ ಮೇಲೆ ಬಂದಿದ್ದೇವೆ.ದಯವಿಟ್ಟು ಹಿಂಬಾಲಿಸಬೇಡಿ ಎಂದು ಮನವಿ ಮಾಡಿದರು. ಮುಂಬೈ ಸೇರಿದ್ದ ಅತೃಪ್ತ ಶಾಸಕರು ಸಿದ್ದರಾಮಯ್ಯ ಅವರ ಸಂಪರ್ಕಕ್ಕೆ ಸಿಕ್ಕಿದ್ದು ಅವರೊಂದಿಗೆ ಸಂಧಾನ ಸಭೆಗಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ..