ಹೊಸಪೇಟೆಯಲ್ಲಿ ದಿಢೀರ್ ಪ್ರತ್ಯಕ್ಷರಾದ ರಾಜೀನಾಮೆ ನೀಡಿದ ಶಾಸಕ ಆನಂದ್ ಸಿಂಗ್!
ನ್ಯೂಸ್ ಕನ್ನಡ ವರದಿ: ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ಪರ್ವಕ್ಕೆ ಶ್ರೀಕಾರ ಹಾಕಿದ್ದ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ನಿನ್ನೆ ಧಿಡೀರ್ ಎಂದು ಹೊಸಪೇಟೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಮೊದಲಿಗೆ ಜುಲೈ 1 ರಂದು ರಾಜೀನಾಮೆ ನೀಡಿದ್ದ ಶಾಸಕ ಆನಂದ್ ಸಿಂಗ್, ಶಾಸಕರ ರಾಜೀನಾಮೆ ಪರ್ವ ಪ್ರಾರಂಭವಾದ ನಂತರ ಕ್ಷೇತ್ರದಿಂದ ದಿಢೀರ್ ಎಂದು ಕಾಣೆ ಆಗಿದ್ದರು. ಆನಂದ್ ಸಿಂಗ್ ಅವರು ಅತೃಪ್ತರನ್ನು ಸೇರಿದ್ದಾರೆ, ಬಿಜೆಪಿಯ ವಶದಲ್ಲಿ ಪುಣೆಯಲ್ಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು.
ಆದರೆ ನಿನ್ನೆ ಏಕಾ-ಏಕಿ ಹೊಸಪೇಟೆಗೆ ಬಂದ ಆನಂದ್ ಸಿಂಗ್ ಅವರು, ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಅಧಿಕಾರಿಗಳೊಟ್ಟಿಗೆ ಮಾತುಕತೆ ನಡೆಸಿದರು. ಶಾಸಕ ಆನಂದ್ ಸಿಂಗ್ ಅವರು ಕಾಣೆ ಆಗಿದ್ದಾರೆ, ಹುಡುಕಿಕೊಡಿ ಎಂದು ಕೆಲವರು ದೂರು ನೀಡಿದ್ದ ಕಾರಣ ಆನಂದ್ ಸಿಂಗ್ ಅವರು ನಿನ್ನೆ ಪೊಲೀಸ್ ಠಾಣೆಗೆ ತೆರಳಿ ಮಾತುಕತೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಲ್ಲಿಯೂ ಹೋಗಿರಲಿಲ್ಲ, ನಮ್ಮ ತಂದೆ ಪೃಥ್ವಿರಾಜ ಸಿಂಗ್ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ದಾಖಲು ಮಾಡಿಸಲಾಗಿತ್ತು, ನಾನು ಅಲ್ಲಿಯೇ ಇದ್ದೆ ಎಂದು ದಾಖಲೆ ಸಹ ತೋರಿಸಿದರು.