ನನ್ನ ಆಪ್ತರಿಗೆ ‘ನೀವು ಬಿಜೆಪಿಗೆ ಸೇರಿ’ ಎನ್ನುವ ನೀಚ ಕೆಲಸ ಯಾವತ್ತೂ ಮಾಡಲ್ಲ!: ಸಿದ್ದರಾಮಯ್ಯ

ನ್ಯೂಸ್ ಕನ್ನಡ ವರದಿ: ಪ್ರಸಕ್ತ ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ಮನನೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾವುಕರಾಗಿ ಮಾತನಾಡಿ ‘ರಾಜಕೀಯದಲ್ಲಿ ಯಾರನ್ನು ನಂಬಬೇಕು ಎಂಬುದೇ ತಿಳಿಯುತ್ತಿಲ್ಲ. ನಂಬಿಕೆ ಎಂಬ ಪದಕ್ಕೆ ಇಲ್ಲಿ‌ ಅರ್ಥವೇ ಇಲ್ಲದಂತೆ ಆಗಿದೆ.‌ ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಬಳಿ ಎಲ್ಲ ಕೆಲಸಗಳನ್ನು ಮಾಡಿಸಿಕೊಂಡ ಶಾಸಕರೇ ಇದೀಗ ನನ್ನ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಈ ಮೂಲಕ ಹೇಸಿಗೆ ತಿನ್ನುವಂತ ಕೆಲಸ ಮಾಡಿದ್ದಾರೆ’ ಎಂದಿದ್ದಾರೆ.

ಕೆಲ ಶಾಸಕರು ನನಗೆ ಆಪ್ತರು. ನಾನೇ ಅವರನ್ನು ಕಳುಹಿಸಿದ್ದೇನೆ ಎಂದು ಅಪ ಪ್ರಚಾರ ಮಾಡಲಾಗುತ್ತಿದೆ.‌ ಹೋದವರಷ್ಟೇ ಅಲ್ಲ, ಇಲ್ಲಿ ಇರುವವರೂ ನನಗೆ ಆಪ್ತರು. ನಾನು ನಿಮ್ಮಲ್ಲಿ ಯಾರಿಗಾದರೂ ಬಿಜೆಪಿಗೆ ಹೋಗುವಂತೆ ಹೇಳಿದ್ದೀನಾ. ಅಂತಹ ನೀಚ ಕೆಲಸವನ್ನು ನಾನು ಮಾಡಲಾರೆ. ಇವರು ಮಾಡಿದ ಕೆಲಸದಿಂದ ನೋವಾಗಿದೆ ಎಂದರು.

ಬಸವರಾಜು, ಸೋಮಶೇಖರ, ಮುನಿರತ್ನ ಹೇಳಿದ ಕೆಲಸವನ್ನೆಲ್ಲ ಮಾಡಿಕೊಟ್ಟೆ. ಅವರೇ ಚೂರಿ ಹಾಕಿದರು. ನನ್ನ ಬಗ್ಗೆ ಅಪಪ್ರಚಾರ ಮಾಡಿದರೆ ಸಿಗುವ ಲಾಭವಾದರೂ ಏನು ? ಎಂಟಿಬಿ, ಮುನಿರತ್ನ, ಸುಧಾಕರ್ ಜೊತೆ ಗಂಟೆಗಟ್ಟಲೆ ಮಾತನಾಡಿದಾಗ ನಾವೂ ಎಲ್ಲೂ ಹೋಗುವುದಿಲ್ಲ ಎಂದು ಹೇಳಿ ಕೈ ಕೊಟ್ಟರು. ಮೋಸ ಮಾಡಿದರು. ಇದಕ್ಕಿಂತ ನೋವು ಇನ್ನೇನು ಆಗಬೇಕು ಎಂದು ಬೇಸರಿಸಿದರು.

Leave a Reply

Your email address will not be published. Required fields are marked *