ಬಿಜೆಪಿ ನಾಯಕರೂ ನನ್ನ ವಿರುದ್ಧ ಸಂಚು ಹೂಡಿದ್ದಾರೆ!: ಲಿಂಬಾವಳಿ ಬಿಚ್ಚಿಟ್ಟ ಸ್ಪೋಟಕ ಮಾಹಿತಿ ಓದಿ

ನ್ಯೂಸ್ ಕನ್ನಡ ವರದಿ: ಇಂದು ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ್ ಲಿಂಬಾವಳಿ, ಬಿಜೆಪಿ ವಿರುದ್ಧ ಮೈತ್ರಿ ನಾಯಕರು ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಬಿಜೆಪಿಯ ರಾಜಕೀಯ ಬೆಳವಣಿಗೆಗಳನ್ನು ಕಂಡು ಈ ಷಡ್ಯಂತ್ರ ನಡೆಯುತ್ತಿದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ವೈರಲ್ ಆಗಿದ್ದ ಅಶ್ಲೀಲ ವೀಡಿಯೋ ಬಗ್ಗೆಯೂ ಮಾತನಾಡಿದ ಲಿಂಬಾವಳಿ, ನನ್ನ ವಿರುದ್ಧವೂ ಕಾಂಗ್ರೆಸ್-ಜೆಡಿಎಸ್ ನಾಯಕರಿಂದ ಷಡ್ಯಂತ್ರ ನಡೆಯುತ್ತಿದೆ. ಮೈತ್ರಿ ನಾಯಕರ ಜೊತೆ ನಮ್ಮ ಪಕ್ಷದ ಒಂದಿಬ್ಬರು ನಾಯಕರು ಕೈಜೋಡಿಸಿ ಸಂಚು ಮಾಡುತ್ತಿದ್ದಾರೆ. ಯಾವ ಷಡ್ಯಂತ್ರ ಎಂದು ಸಂದರ್ಭ ಬಂದಾಗ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಯಾವ ವಿಚಾರ ಎನ್ನುವುದನ್ನು ಲಿಂಬಾವಳಿ ಅವರು ಸ್ಪಷ್ಟವಾಗಿ ಹೇಳಲಿಲ್ಲ.

ವಿಶ್ವಾಸ ಮತವನ್ನು ಇಂದಾದರೂ ಮುಗಿಸಬೇಕು ಎಂದು ಬಿಜೆಪಿ ಒತ್ತಾಯ ಮಾಡುತ್ತಿದೆ. ಈಗಾಗಲೇ ಈ ಬಗ್ಗೆ ಸ್ಪೀಕರ್ ಅವರಿಗೆ ಪತ್ರ ಬರೆಯುವ ಮೂಲಕ ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿದ್ದೇವೆ. ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ರೀತಿಯ ಬೆಳವಣಿಗೆಗಳನ್ನು ರಾಜ್ಯದ ಆಡಳಿತಾರೂಢ ಸರ್ಕಾರ ಮಾಡುತ್ತಿದೆ ಎಂದರು.

ಶಾಸಕರಿಗೆ ಹೆದರಿಸುವುದು, ಬಿಜೆಪಿ ಶಾಸಕರಿಗೆ ಆಮಿಷ ತೋರಿಸುವ ಕೆಲಸವನ್ನೂ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಇಂದು ಇದನ್ನು ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಸದನದ ಬೆಳವಣಿಗೆ ನೋಡಿ ನಾಳೆ ತೆಗೆದುಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸುವುದಾಗಿ ಕೋರ್ಟ್ ಹೇಳಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *