ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪದಗ್ರಹಣಕ್ಕೆ ಫಿಕ್ಸ್ ಆದ ಮುಹೂರ್ತ !

ನ್ಯೂಸ್ ಕನ್ನಡ ವರದಿ : ಮೈತ್ರಿ ಪಕ್ಷದ ಪತನದ ನಂತರ ಬಿಜೆಪಿ ನಾಯಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇಂದು ಬೆಳಗ್ಗೆಯಿಂದ ಯಡಿಯೂರಪ್ಪನವರ ಮನೆಮುಂದೆ ಬಿಜೆಪಿ ನಾಯಕರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇಂದು ರಾಜ್ಯಪಾಲರನ್ನು ಭೇಟಿ ಮಾಡಲಿರುವ ಬಿಎಸ್​ವೈ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ. ನಂತರ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆಯಲಿರುವ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಾಂಕೇತಿಕವಾಗಿ ನಡೆಯಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಬಹುತೇಕ ಖಚಿತವಾಗಿದ್ದು ಶುಕ್ರವಾರ ಸಂಜೆ 4ಕ್ಕೆ ಮುಹೂರ್ತವನ್ನೂ ಫಿಕ್ಸ್ ಮಾಡಲಾಗಿದೆ.

ಶಾಸಕಾಂಗ ಪಕ್ಷದ ಸಭೆಯ ನಂತರ ಬಿಎಸ್​ವೈ ದೆಹಲಿಗೆ ಹೊರಡಲಿದ್ದು, ಅಮಿತ್ ಷಾ, ಪಿಯೂಷ್ ಗೋಯೆಲ್, ರಾಜನಾಥ್ ಸಿಂಗ್, ಜೆ.ಪಿ.ನಡ್ಡಾ, ನಿತಿನ್ ಗಡ್ಕರಿ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲಿದ್ದಾರೆ. ಅಲ್ಲದೆ ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಬಿಎಸ್​ವೈ ಅವರು ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾದ ನಂತರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಅಧೀಕೃತವಾಗಿ ಫಿಕ್ಸ್ ಆಗಲಿದೆ. ಈಗಾಗಲೇ ಬಿಎಸ್​ವೈ ಆಪ್ತ ಶಾಸ್ತ್ರಿಗಳಿಂದ ಪ್ರಮಾಣ ವಚನಕ್ಕೆ ದಿನಾಂಕ ಮತ್ತು ಸಮಯ ನಿಗದಿಯಾಗಿದ್ದು, ಇದಕ್ಕೆ ಇನ್ನೂ ಯಡಿಯೂರಪ್ಪ ಅನುಮತಿಯೊಂದು ಬಾಕಿ ಇದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *