ಎಸ್.ಎಂ ಕೃಷ್ಣರ ಅಳಿಯ ಮಂಗಳೂರಿನಲ್ಲಿ ನಾಪತ್ತೆ! ಇಲ್ಲಿದೆ ಸಂಪೂರ್ಣ ಮಾಹಿತಿ
ನ್ಯೂಸ್ ಕನ್ನಡ ವರದಿ: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫೀ ಡೇ ಮಾಲೀಕ ವಿ. ಜಿ. ಸಿದ್ಧಾರ್ಥ್ ನಿನ್ನೆ ರಾತ್ರಿ ಮಂಗಳೂರಿನ ಉಳ್ಳಾಲ ಸಮೀಪ ದಿಢೀರ್ ನಾಪತ್ತೆಯಾಗಿದ್ದಾರೆ. ಈ ಘಟನೆಯಿಂದ ಅವರ ಕುಟುಂಬ ಹಾಗೂ ಆಪ್ತ ವಲಯದಲ್ಲಿ ಆತಂಕ ಮನೆ ಮಾಡಿದೆ. ಕೆಫೆ ಕಾಫಿ ಡೇ ಸೇರಿದಂತೆ ಹಲವು ಉದ್ಯಮಗಳನ್ನು ಮುನ್ನಡೆಸುತ್ತಿದ್ದ ಸಿದ್ಧಾರ್ಥ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಅವರು ಕಾಣೆಯಾಗಿದ್ದಾರೆ .
ಬೆಂಗಳೂರಿನಿಂದ ಏಂ 03 ಓಅ 2592 ನೋಂದಣಿಯ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದ ವಿ.ಜಿ. ಸಿದ್ದಾರ್ಥ ಅವರು ನೇತ್ರಾವತಿ ನದಿ ಸೇತುವೆ ಬಳಿ ನಡೆದುಕೊಂಡು ಹೋಗಿದ್ದು ಎಲ್ಲಿಗೆ ಎಂಬುದರ ಬಗ್ಗೆ ತನಿಖೆ ತೀವ್ರಗೊಂಡಿದೆ. ಸೋಮವಾರ ಸಂಜೆಯಿಂದ ತೀವ್ರವಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಸ್ಥಳದಲ್ಲಿ ಜಿಲ್ಲಾಧಿಕಾರಿ ಡಿಸಿಪಿ ಲಕ್ಷ್ಮೀ ಗಣೇಶ್ ಸೇರಿದಂತೆ ಉನ್ನತಾಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಕೋಟೆಕಾರ್ ಬಳಿಯ ನದಿಯಲ್ಲಿ ದೋಣಿಗಳ ಮೂಲಕ ಹುಡುಕಲಾಗುತ್ತಿದೆ. ಅಗ್ನಿಶಾಮಕ ದಳ, ಮುಳುಗು ತಜ್ಞರನ್ನು ಬಳಸಿ ನದಿ ಪರಿಶೀಲನೆ ನಡೆಸಲಾಗಿದೆ.
ಶಾಸಕ ಯು.ಟಿ.ಖಾದರ್, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ನೇತೃತ್ವದಲ್ಲಿ ಭಾರೀ ಸಂಖ್ಯೆಯ ಪೊಲೀಸರು ಶೋಧ ನಡೆಸಿದ್ದಾರೆ. ಸಿದ್ಧಾರ್ಥ್ ಕಾರಿನಿಂದ ಇಳಿದು ಹೋದ ಬಳಿಕ ಅವರು ಕಾಣದೇ ಇದ್ದಾಗ ಚಾಲಕ ಕರೆ ಮಾಡಿದರೂ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ. ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಕಾರು ಚಾಲಕ ತಕ್ಷಣ ಈ ವಿಚಾರವನ್ನು ಸಿದ್ಧಾರ್ಥ್ ಮನೆಯವರಿಗೆ ತಿಳಿಸಿದ್ದಾರೆ. ಸಿದ್ಧಾರ್ಥ್ ಅವರು ಕಾರಿನಿಂದ ಇಳಿದ ಜಪ್ಪಿನ ಮೊಗರು ಪ್ರದೇಶ ನೇತ್ರಾವತಿ ನದಿ ತಟದಲ್ಲೇ ಇರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಇಲ್ಲೇ ಇರು, ಈಗ ವಾಪಸ್ ಬರುತ್ತೇನೆ ಎಂದು ಸೂಚಿಸಿ ಮೊಬೈಲ್ನಲ್ಲಿ ಮಾತನಾಡುತ್ತ ತೆರಳಿದ್ದರು. ಅರ್ಧ ಗಂಟೆ ಕಳೆದರೂ ವಾಪಸ್ ಬರದಿದ್ದುದರಿಂದ ಸಿದ್ಧಾರ್ಥ ಅವರ ಮೊಬೈಲ್ಗೆ ಕರೆ ಮಾಡಿದೆ. ಫೋನ್ ಸ್ವಿಚ್ ಆಫ್ ಆಗಿತ್ತು. ಗಾಬರಿಯಾಗಿ ಮನೆಯವರಿಗೆ ತಿಳಿಸಿದೆ’ ಎಂದು ಕಾರಿನ ಚಾಲಕ ಹೇಳಿರುವುದಾಗಿ ತಿಳಿದು ಬಂದಿದೆ.
ಇತ್ತ ಬೆಂಗಳೂರಿನಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಆತಂಕ ಮನೆ ಮಾಡಿದೆ. ಈ ಘಟನೆಯ ಬಗ್ಗೆ ಎಸ್.ಎಂ.ಕೃಷ್ಣ ಅವರ ನಿವಾಸದ ಬಳಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿಎಲ್ ಶಂಕರ್, ಕಾಫಿ ಡೇ ಉದ್ಯಮದ ಮಾಲೀಕರಾಗಿರುವ ಸಿದ್ಧಾರ್ಥ್ ಪ್ರಯಾಣ ಮಾಡುವ ವೇಳೆ ನಾಪತ್ತೆಯಾಗಿದ್ದಾರೆ. ನಾಪತ್ತೆಗೂ ಮೊದಲು ಅವರು ಯಾರ ಜೊತೆ ಮಾತನಾಡಿದರು ಎಂಬುದು ತಿಳಿದಿಲ್ಲ. ಅವರ ಕಚೇರಿ ತೆರೆದ ಬಳಿಕ ಏನಾದರೂ ಮಾಹಿತಿ ಸಿಗಬಹುದು. ಯಾವುದೇ ತೊಂದರೆ ಆಗದೇ ವಾಪಸ್ ಸಿಗಲಿ ಎಂಬ ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವೆ ಎಂದರು.
ಸಿದ್ಧಾರ್ಥ್ ನಮ್ಮ ಊರಿನವರು ಹಾಗೂ ದೊಡ್ಡ ಉದ್ಯಮಿ. ಅವರ ಕುಟುಂಬ ಆತಂಕದಲ್ಲಿದೆ. ಹಾಗಾಗಿ ನಾವು ನೋಡಲು ಬಂದಿದ್ದೇವೆ. ಯಾವುದೇ ಸಮಸ್ಯೆ ಬಂದರೂ ಅವರು ಎದುರಿಸುತ್ತಿದ್ದರು. ಪ್ರಕರಣ ತನಿಖಾ ಹಂತದಲ್ಲಿದ್ದು ತನಿಖೆ ಬಳಿಕ ಎಲ್ಲವೂ ವಿವರವಾಗಿ ತಿಳಿಯಲಿದೆ ಎಂದರು.
# ಘಟನೆಯ ವಿವರ :
ವ್ಯವಹಾರ ನಿಮಿತ್ತ ಸಿದ್ಧಾರ್ಥ್ ಅವರು ತಮ್ಮ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿದ್ದರು. ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ಇದ್ದು, ಇಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ.
ಬಳಿಕ ಕಾರಿನಿಂದ ಇಳಿದು ಅವರು ಫೋನ್ನಲ್ಲಿ ಮಾತನಾಡುತ್ತಾ ಹೋಗಿದ್ದಾರೆ. ಆದರೆ ಅರ್ಧ ಗಂಟೆಯಾದರೂ ಸಿದ್ಧಾರ್ಥ್ ಅವರು ವಾಪಸ್ ಬರದೇ ಇದ್ದುದನ್ನು ಕಂಡು ಗಾಬರಿಯಾದ ಚಾಲಕ ಅವರಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಅವರ ಫೋನ್ ಸ್ವಿಚ್ಡ್ ಆಫ್ ಆಗಿದ್ದು ಗಮನಕ್ಕೆ ಬಂದಿದೆ.
# ಸಿದ್ಧಾರ್ಥ್ ಯಾರು?:
ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಪುತ್ರಿಯನ್ನು ವಿವಾಹವಾಗಿದ್ದಾರೆ. ಮಂಗಳೂರಿನ ಸಾಫ್ಟ್ವೇರ್ ಕಂಪೆನಿಗಳಿಗೆ ಹೂಡಿಕೆ ಮಾಡಿದ್ದಾರೆ. ಷೇರು ಮಾರುಕಟ್ಟೆ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದಾರೆ.
ಜೊತೆಗೆ ಮುಂಬೈನ ಜೆ.ಎಂ.ಫೈನಾಶಿಯಲ್ ಲಿಮಿಟೆಡ್ ನಲ್ಲಿ ಕಾರ್ಯನಿರ್ವಹಿಸಿದರು. ಎರಡು ವರ್ಷಗಳ ನಂತರ ಬೆಂಗಳೂರಿಗೆ ಆಗಮಿಸಿ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿದರು. ಸಿವಾನ್ ಸೆಕ್ಯೂರಿಟೀಸ್ ಎಂಬ ಹೆಸರಿನಲ್ಲಿ ಮೊದಲು ಕಂಪನಿ ಆರಂಭಿಸಿದರು.
2000ನೇ ಇಸವಿಯಲ್ಲಿ ಇದಕ್ಕೆ ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಅಂಥ ನಾಮಕರಣ ಮಾಡಲಾಯಿತು. ಇದರ ಜತೆಗೆ ಮೇಲೆ ಇಂದು ಖ್ಯಾತವಾಗಿರುವ ಕಾಫೀ ಡೇ ಉದ್ಯಮವನ್ನು ಆರಂಭಿಸಿದರು. ಚಿಕ್ಕಮಗಳೂರಿನ ಕಾಫಿ ಘಮವನ್ನು ಇಡೀ ಪ್ರಪಂಚದಾದ್ಯಂತ ಪರಿಚಯಿಸಿದ ಕೀರ್ತಿ ಸಿದ್ದಾರ್ಥ ಅವರಿಗೆ ಸಲ್ಲುತ್ತದೆ.