ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಬಿಡಿ, ಮೋದಿ ವಾರಣಾಸಿಯಲ್ಲಿ ಗೆಲ್ಲುವುದೇ ಕಷ್ಟ: ರಾಹುಲ್ ಗಾಂಧಿ
ನ್ಯೂಸ್ ಕನ್ನಡ ವರದಿ(08-04-2018): 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಬಿಡಿ, ಪ್ರತಿಪಕ್ಷಗಳು ಒಗ್ಗಟ್ಟಾದರೆ ಸ್ವಕ್ಷೇತ್ರ ವಾರಣಾಸಿಯಿಂದ ಪ್ರಧಾನಿ ಮೋದಿ ಗೆಲ್ಲುವುದು ಅಸಾಧ್ಯ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ವಾರಣಾಸಿಯಲ್ಲಿ ಎಸ್ ಪಿ ಮತ್ತು ಬಿಎಸ್ಪಿ ಒಂದಾದರೆ ಪ್ರಧಾನಿ ಮೋದಿ ತಮ್ಮ ಕ್ಷೇತ್ರವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಜನಾರ್ಶೀವಾದ ಯಾತ್ರೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದ್ವೇಷ, ಅಸೂಯೆ ಬಿತ್ತುವ ಮತ್ತು ಸಮಾಜವನ್ನು ವಿಭಜಿಸುವ ಕೆಲಸವನ್ನು ಜಿಜೆಪಿ ಮಾಡುತ್ತಿದೆ ಆರೋಪಿಸಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪ್ರತಿಪಕ್ಷಗಳ ಮುಖಂಡರನ್ನು ಬೆಕ್ಕು, ನಾಯಿ, ಪ್ರಾಣಿ, ಪಕ್ಷಿಗಳಿಗೆ ನಿಕೃಷ್ಟವಾಗಿ ಹೋಲಿಸಿದ್ದಾರೆ. ಆದರೆ, ಕಾಂಗ್ರೆಸ್ ಎಂದೂ ಇಂಥಹ ಕೆಲಸ ಮಾಡಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಜೈಲಿಗೆ ಹೋಗಿ ಬಂದವರನ್ನು ಪಕ್ಕ ಕೂರಿಸಿಕೊಂಡು ಭ್ರಷ್ಟಾಚಾರದ ಮಾತುಗಳನ್ನು ಆಡುತ್ತಾರೆ. ಸಾವಿರಾರು ಕೋಟಿ ವಂಚನೆ ಮಾಡಿ ವಿದೇಶಕ್ಕೆ ಹೋದವರ ಬಗ್ಗೆ ಮೋದಿ ಮಾತನಾಡುವುದಿಲ್ಲ ಎಂದರು.