ಅನರ್ಹ ಶಾಸಕ ಮುನಿರತ್ನ ರಹಸ್ಯ ಭೇಟಿಯ ಬಗ್ಗೆ ಡಿಕೆಶಿ ಹೇಳಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ ನ್ಯೂಸ್)ಬೆಂಗಳೂರು: ಅನರ್ಹಗೊಂಡ ಶಾಸಕ ಮುನಿರತ್ನ ತಮ್ಮ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಡಿ ಕೆ ಶಿವಕುಮಾರ್, ಈ ಬಗ್ಗೆ ಬಂದಿರುವ ವರದಿ ಸುಳ್ಳು ಎಂದು ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಮುನಿರತ್ನನೂ ತಮ್ಮನ್ನು ಭೇಟಿ ಮಾಡಿಲ್ಲ. ಅದೆಲ್ಲಾ ಸುಳ್ಳು, ನಾವು ನಮ್ಮ ಪಕ್ಷದ ಕೆಲಸ ಮಾಡುತ್ತಿದ್ದೇವೆ. ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ. ನಾನು ನನ್ನದೇ ಆದ ರಾಜಕಾರಣವನ್ನು ಮಾಡುತ್ತಿದ್ದೇನೆ. ಅದನ್ನೇ ಮುಂದುವರಿಸುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.

ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುತ್ತಿರುವ ಬಗ್ಗೆ ಕೇಳಿದಾಗ, ಈ ಬಗ್ಗೆ ತಮಗೆ ಮಾಹಿತಿ ಇಲ್ಲ. ಈಗ ತಾವೊಬ್ಬ ಶಾಸಕ ಅಷ್ಟೇ. ಅದು ಬಿಟ್ಟು ಬೇರೆ ಗೊತ್ತಿಲ್ಲ. ಬಿಜೆಪಿಯವರು ಸೆಳೆಯುತ್ತಿದ್ದಾರೆ ಎಂಬುದನ್ನು ಪತ್ರಿಕೆಯಲ್ಲಿ ಓದಿದ್ದೇನೆ. ಇನ್ನು ಎಷ್ಟು ಜನ ಬೇಕೋ ಅಷ್ಟು ಜನರನ್ನು ಕರೆದುಕೊಂಡು ಹೋಗಲಿ, ಉಳಿದಿರುವುದು ಇನ್ನೇನಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಪ್ರತಿ ಪಕ್ಷ ನಾಯಕ ಸ್ಥಾನದ ಬಗ್ಗೆ ಕೇಳಿದಾಗ, ಪ್ರಸ್ತುವ ಯಾವ ಸ್ಥಾನವೂ ಖಾಲಿ ಇಲ್ಲ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ, ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಸದ್ಯಕ್ಕೆ ನಾನು ಮಾಜಿ ಸಚಿವ ಮತ್ತು ಹಾಲಿ ಶಾಸಕ ಅಷ್ಟೇ. ಈಗ ಕ್ಷೇತ್ರದ ಕಡೆ ಗಮನಹರಿಸುವ ಅವಕಾಶ ಸಿಕ್ಕಿದೆ ಎಂದು ಸೂಚ್ಯವಾಗಿ ಹೇಳಿದರು.

Leave a Reply

Your email address will not be published. Required fields are marked *