ಮಂಗಳೂರು: ನೆಲ್ಯಾಡಿಯಲ್ಲಿ ಅಂಬಲವೇಲಿಲ್ ಪ್ರೊಫೆಶನ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಶುಭಾರಂಭ!

ನ್ಯೂಸ್ ಕನ್ನಡ ವರದಿ ನೆಲ್ಯಾಡಿ: ಉದ್ಯೋಗ ಆಧಾರಿತ ವಿವಿಧ ಕೋರ್ಸ್‌ಗಳ ತರಬೇತಿ ಸಂಸ್ಥೆ ಅಂಬಲವೇಲಿಲ್ ಪ್ರೊಫೆಶನಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಆ.21ರಂದು ನೆಲ್ಯಾಡಿ ಎಸ್.ವಿ.ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರಕಾರಿ, ಖಾಸಗಿ ಉದ್ಯೋಗ ಪಡೆಯಲು ತರಬೇತಿ ಅತಿ ಮುಖ್ಯವಾಗಿದೆ. ನೆಲ್ಯಾಡಿಯಂತ ಬೆಳೆಯುತ್ತಿರುವ ಪಟ್ಟಣದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತ ಕೋರ್ಸುಗಳ ತರಬೇತಿಗೆ ಅನುಕೂಲವಾಗುವಂತೆ ಆರಂಭಗೊಂಡಿರುವ ಅಂಬಲವೇಲಿಲ್ ಪ್ರೊಫೆಶನಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಈ ಭಾಗದ ವಿದ್ಯಾರ್ಥಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ವರದಾನವಾಗಲಿದೆ. ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದರು. ನೆಲ್ಯಾಡಿ ಸೈಂಟ್ ತೋಮಸ್ ಇವಾಂಜಲಿಕಲ್ ಚರ್ಚ್‌ನ ಧರ್ಮಗುರು ತೋಮಸ್ ವರ್ಗೀಸ್‌ರವರು ಪೂಜಾ ವಿಧಿವಿಧಾನ ನೆರವೇರಿಸಿದರು. ನೆಲ್ಯಾಡಿ ಎ.ಜಿ.ಚರ್ಚ್‌ನ ಧರ್ಮಗುರು ಫಾ.ಪ್ರಮೋದ್, ನೆಲ್ಯಾಡಿ ಸೈಂಟ್ ತೋಮಸ್ ಚಾಕೋಬೈಟ್ ಚರ್ಚ್‌ನ ಧರ್ಮಗುರು ಫಾ.ಬಿನು ಜೋಸೆಫ್, ನೆಲ್ಯಾಡಿ ಎಸ್.ವಿ.ಕಾಂಪ್ಲೆಕ್ಸ್‌ನ ಮಾಲಕ ಸುಬ್ರಹ್ಮಣ್ಯ ಆಚಾರ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು.

ಮಾಲಕ ಸುಜಿತ್ ಅಂಬಲವೇಲಿಲ್‌ರವರು ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭಾವಂತ ಯುವಕರು ಹೊಸದಾಗಿ ಉದ್ಯೋಗಕ್ಕೆ ಸೇರುವ ವೇಳೆ ಅವರ ಅನುಭವದ ಕೊರತೆಯನ್ನೇ ಬಂಡವಾಳವಾಗಿ ಮಾಡಿಕೊಂಡು ಅವರಿಗೆ ‘ಟ್ರೈನಿಂಗ್ ಅವಧಿ’ ಎಂಬ ನೆಪವೊಡ್ಡಿ ಸಂಬಳ ನೀಡದೇ ಅಥವಾ ಕಡಿಮೆ ಸಂಬಳ ನೀಡಿ ದುಡಿಸುತ್ತಿರುತ್ತಾರೆ. ಅಲ್ಲದೇ ಕೆಲವೊಂದು ಕಂಪನಿಗಳಲ್ಲಿ ಕಾಟಾಚಾರಕ್ಕೆ ತರಬೇತಿ ಸಿಗುತ್ತದೆಯೇ ಹೊರತು ಯಾರೂ ಹೆಚ್ಚಿನ ಒತ್ತು ನೀಡಿ ತರಬೇತಿ ನೀಡುವುದಿಲ್ಲ. ಈ ನಿಟ್ಟಿನಲ್ಲಿ ಉದ್ಯೋಗ ಆಕಾಂಕ್ಷಿಗಳಾಗಿರುವ ಯುವ ಜನತೆಯ ಉಜ್ವಲ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶವಾದ ನೆಲ್ಯಾಡಿಯಲ್ಲಿ ಅಂಬಲವೇಲಿಲ್ ಪ್ರೊಫೆಶನಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಆರಂಭಿಸಿದ್ದೇವೆ.

ಮೂರು ತಿಂಗಳು ನುರಿತ ಅನುಭವೀ ತರಬೇತುದಾರರು ತರಬೇತಿ ನೀಡಿ ಯುವ ಜನತೆಯ ವೃತ್ತಿ ಜೀವನದ ಮೆಟ್ಟಿಲನ್ನು ಯಶಸ್ವಿಯಾಗಿ ದಾಟಲು ಸಜ್ಜುಗೊಳಿಸಲಿದ್ದಾರೆ. ತರಬೇತಿ ಸಮಯದಲ್ಲಿ ಹಲವಾರು ಪರೀಕ್ಷೆಗಳ ಮೂಲಕ ಯುವಕರ ತೇರ್ಗಡೆಯ ಅರ್ಹತೆಯ ಆಧಾರದಲ್ಲಿ ನಮ್ಮ ಸಂಸ್ಥೆಯೇ ಅವರಿಗೆ ಉದ್ಯೋಗವೂ ನೀಡಲಿದೆ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ, ವಿದೇಶದಲ್ಲಿ ಕೆಲಸ ಮಾಡಬೇಕೆಂದು ಕನಸಿರುವವರಿಗೆ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯತೆಯನ್ನು ಪಡೆಯಲು ವೇದಿಕೆಯಾಗಿ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದರು. ಜಿಷಾ ಸುಜಿತ್, ಎ.ಎಸ್.ರಾಜು., ಲಿಲ್ಲಿರಾಜುರವರು ಸಹಕರಿಸಿದರು.

Leave a Reply

Your email address will not be published. Required fields are marked *