ಬಾಬರ್ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಿದ ಎಂಬುದನ್ನು 500 ವರ್ಷಗಳ ನಂತರ ಪರಿಶೀಲಿಸವುದು ಹೇಗೆ: ಸುಪ್ರೀಂ ಕೋರ್ಟ್
ನ್ಯೂಸ್ ಕನ್ನಡ ವರದಿ: ಬಾಬರ್ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಿದ್ದನೇ ಎಂಬುದನ್ನು 500 ವರ್ಷಗಳ ನಂತರ ನ್ಯಾಯಬದ್ಧವಾಗಿ ಪರಿಶೀಲಿಸುವುದು ಸ್ವಲ್ಪ ಕಷ್ಟಕರ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ಹಿಂದೂ ಸಂಘಟನೆ ಅಖಿಲ ಭಾರತ ಶ್ರೀರಾಮ ಜನ್ಮಭೂಮಿ ಪುನರುದ್ಧಾರ ಸಮಿತಿಯ ಪರ ವಕೀಲ ಪಿ.ಎನ್ ಮಿಶ್ರಾ, ಅಯೋಧ್ಯೆಯಲ್ಲಿ ಬಾಬರ್ ಮಸೀದಿ ನಿರ್ಮಿಸಿರಲಿಲ್ಲ ಎಂದು ವಾದಿಸಿದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ತನ್ನ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸಿದೆ. ಬಾಬರ್ ಈ ಮಸೀದಿಯನ್ನು ಶರಿಯಾ, ಹದೀಸ್ ಮತ್ತು ಇತರ ಇಸ್ಲಾಂ ಸಂಪ್ರದಾಯಗಳನ್ನು ಅನುಸರಿಸದೆ ನಿರ್ಮಿಸಿದನೇ ಎಂಬುದನ್ನು ಪರಿಗಣಿಸುವುದಿಲ್ಲ ಎಂದು ಹೇಳುವಲ್ಲಿ ಉಚ್ಚ ನ್ಯಾಯಾಲಯ ತಪ್ಪು ಮಾಡಿದೆ ಎಂದು ಮಿಶ್ರಾ ಶ್ರೇಷ್ಠ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಬಾಬರ್ ಅಯೋಧ್ಯೆಯ ವಿವಾದಿತ ಜಮೀನಿನ ಮಾಲಕನಾಗಿರಲಿಲ್ಲ ಎಂಬ ಆರೋಪದ ಬಗ್ಗೆ ವಿಚಾರಣೆ ನಡೆಸುವ ಬದಲು ಉಚ್ಚ ನ್ಯಾಯಾಲಯ ಈ ಘಟನೆ ನಡೆದು 500 ವರ್ಷಗಳು ಕಳೆದಿರುವುದರಿಂದ ಅದರ ಬಗ್ಗೆ ನ್ಯಾಯಾಲಯ ತಲೆಕೆಡಿಸಿಕೊಳ್ಳುವುದಿಲ್ಲ. ಅದೇನಿದ್ದರೂ ಇತಿಹಾಸತಜ್ಞರ ಕೆಲಸವಾಗಿದೆ ಎಂದು ತಿಳಿಸಿತ್ತು.
ಉಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದ ಮಿಶ್ರಾ, ಈ ತೀರ್ಪಿನಲ್ಲಿ, 1528ರಲ್ಲಿ ಬಾಬರ್ ಈ ಮಸೀದಿಯನ್ನು ನಿರ್ಮಿಸಿದ ಎನ್ನುವುದನ್ನು ಸಾಬೀತುಪಡಿಸಲು ಮುಸ್ಲಿಮರು ವಿಫಲವಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.