ಶಾಹಿನ್ ಭಾಗ್ ನಲ್ಲಿ ತನ್ನ ಮಗು ಮೃತಪಟ್ಟ ಬಳಿಕವೂ ಪ್ರತಿಭಟನೆ ಮುಂದುವರಿಸಿದ ತಾಯಿ!
ನ್ಯೂಸ್ ಕನ್ನಡ ವರದಿ: (04.02.2020): ನವದೆಹಲಿಯ ಶಾಹೀನ್ ಭಾಗ್ ಎಂಬಲ್ಲಿ ಹಲವಾರು ದಿನಗಳಿಂದ ಸಿಎಎ ಮತ್ತು ಎನ್ನಾರ್ಸಿ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ಹೆಚ್ಚುತ್ತಿದೆ. ಈ ನಡುವೆ ಅಲ್ಲಿನ ಚಳಿ ತಾಳಲಾರದೇ ನಾಲ್ಕು ತಿಂಗಳು ಪ್ರಾಯವಿರುವ ಪುಟ್ಟ ಹಸುಗೂಸೊಂದು ಮೃತಪಟ್ಟಿತ್ತು. ಮಗು ಮೃತಪಟ್ಟರೂ ಕೂಡಾ ಪೋಷಕರು ಇದೀಗ ಮತ್ತೆ ಶಾಹೀನ್ ಭಾಗ್ ನಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಷ್ಟ್ರಧ್ವಜವನ್ನೇ ಹೊದ್ದು ಮಲಗಿದ್ದ ಪುಟ್ಟ ಹಸುಗೂಸು ಮೊನ್ನೆ ತಾನೇ ಚಳಿಯ ತೀವ್ರತೆಯಿಂದ ಮೃತಪಟ್ಟಿತ್ತು. ಈ ಮಗುವಿನ ಹೆತ್ತವರಾದ ಆರೀಫ್ ಮತ್ತು ನಾಝಿಯಾ ಎಂಬವರು ಸ್ವಂತವಾಗಿ ಮನೆಯೂ ಇಲ್ಲದೇ ಉತ್ತರಪ್ರದೇಶದ ಬರೇಲ್ವಿಯಲ್ಲಿ ಪ್ಲಾಸ್ಟಿಕ್ ಶೀಟ್ ಹೊದ್ದ ಸಣ್ಣ ಗುಡಿಸಲೊಂದರಲ್ಲಿ ವಾಸ ಮಾಡುತ್ತಿದ್ದರು.
ಈ ಕುರಿತು ಮಾತನಾಡಿದ ಮಗುವಿನ ಪೋಷಕರು, ನಮ್ಮ ಮಗು ಚಳಿ ತಾಳಲಾರದೇ ಮೃತಪಟ್ಟಿದೆ ಎಂದು ಮಗು ಧರಿಸುತ್ತಿದ್ದ ಐ ಲವ್ ಮೈ ಇಂಡಿಯಾ ಎಂಬ ಉಣ್ಣೆಯ ಟೋಪಿಯನ್ನು ತೋರಿಸಿ ಗದ್ಗದಿತರಾದರು. ಮುಂದುವರಿದು ಮಾತನಾಡಿದ ಅವರು, ಧರ್ಮಾಧಾರಿತವಾಗಿ ದೇಶವನ್ನು ವಿಭಜಿಸುವ ಕಾಯ್ದೆಯನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಮ್ಮ ಮಗು ಮೃತಪಟ್ಟಿತು. ಭಾರತದಲ್ಲಿ ಉಳಿದ ಮಕ್ಕಳ ಭವಿಷ್ಯಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ನಾಝಿಯಾ ಹೇಳಿದ್ದಾರೆ.